ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೆ 3 ಬಲಿ

ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೆ 3 ಬಲಿ

ಬೀದರ್ : ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಹಾವಳಿ ಮುಂದುವರೆದಿದೆ. ಈ ಮಹಾಮಾರಿಗೆ ಜಿಲ್ಲೆಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ ಮತ್ತು 43 ಜನರಲ್ಲಿ ಹೊಸದಾಗಿ ಈ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 119ಕ್ಕೆ ಏರಿಕೆಯಾದರೆ, ಪಾಸಿಟಿವ್ ಪ್ರಕರಣಗಳ ಸಂಖ್ಯೆ 3791ಕ್ಕೆ ಏರಿದೆ. ಕೋವಿಡ್ 19 ಸೋಂಕಿನಿಂದ ಇಲ್ಲಿನ ಪ್ರತಾಪ ನಗರದ 66 ವರ್ಷದ ಮಹಿಳೆ, ಬಸವ ಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ 65 ವರ್ಷದ ವ್ಯಕ್ತಿ ಹಾಗೂ ತಾಲೂಕಿನ ಬೆಟಬಾಲಕುಂದಾ ಗ್ರಾಮದ 48 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಅಧಿಕ ರಕ್ತದೊತ್ತಡ ಸೇರಿ ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದ ಈ ಮೂವರರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿತ್ತು ಮತ್ತು ಇವರೆಲ್ಲಾ ಚಿಕಿತ್ಸೆ ಫಲಿಸದೇ ಬ್ರಿಮ್ಸ್ನಲ್ಲಿ ಮೃತಪಟ್ಟಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 3791ಕ್ಕೆ ಏರಿಕೆಯಾಗಿದೆ. ಬುಧವಾರ ಒಂದೇ ದಿನ 131 ಜನ ಸೋಂಕಿತರು ಸೇರಿ ಇದುವರಗೆ 2723 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 945 ಸಕ್ರಿಯ ಪ್ರಕರಣಗಳಿವೆ.

Related