ಕಾಂಗ್ರೆಸ್ ದೇಶದ ಉತ್ಸವ ಮಾಡಬೇಕು: ಡಿ.ಕೆ.ಶಿ

ಕಾಂಗ್ರೆಸ್ ದೇಶದ ಉತ್ಸವ ಮಾಡಬೇಕು: ಡಿ.ಕೆ.ಶಿ

ಬೆಂಗಳೂರು, ಜು 13 : ‘ನನಗೆ ಯಾವ ಉತ್ಸವವೂ ಬೇಡ. ನನಗೆ ಕಾಂಗ್ರೆಸ್ ಹಾಗೂ ದೇಶದ ಉತ್ಸವ ಬೇಕು. ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಗುರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

‘ಅಭಿಮಾನಿಗಳು ಅಭಿಮಾನದಿಂದ ಏನು ಮಾತನಾಡುತ್ತಾರೋ ಅದು ನನಗೆ ಬೇಡ. ನನ್ನ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳು ಜಾಹೀರಾತು ನೀಡುತ್ತೇವೆ ಎಂದಾಗಲೂ ಬೇಡ ಎಂದಿದ್ದೆ. ನನ್ನ ಕುಟುಂಬದ ಸಮೇತ ಕೇದಾರನಾಥಕ್ಕೆ ಹೋಗಿ ಅಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಬಂದೆ. ಬೇರೆಯವರ ಹೇಳಿಕೆ ಅಭಿಮಾನದ ವಿಚಾರ ಅಷ್ಟೆ.

ನಾನು ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ದಿನವೇ, ಯಾರೂ ಕೂಡ ನನ್ನ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಅಭಿಮಾನಿಗಳು ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ.’

ಈ ವಿಚಾರ ವಿರೋಧ ಪಕ್ಷಗಳಿಗೆ ಆಹಾರವಾಗುವುದಿಲ್ಲವೆ ಎಂಬ ಪ್ರಶ್ನೆಗೆ, ‘ ಮಾಧ್ಯಮಗಳಿಗೂ ಇದೇ ಆಹಾರ ಬೇಕು. ಅದಕ್ಕಾಗಿ ನನ್ನನ್ನು ಬಂದು ಈ ವಿಚಾರವಾಗಿ ಕೇಳುತ್ತಿದ್ದೀರಿ’ ಎಂದು ತಿಳಿಸಿದರು.

ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಇರುವುದಿಲ್ಲ ಎಂಬ ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಅವರು 10 ವರ್ಷಗಳ ನಂತರವಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಂತೋಷವಾಗಿದೆ. ಸೋಲನ್ನು ಅವರು ಈಗಲೇ ಒಪ್ಪಿಕೊಳ್ಳುತ್ತಿದ್ದಾರಲ್ಲ, ಅಷ್ಟೇ ಸಾಕು ‘ ಎಂದು ತಿರುಗೇಟು ನೀಡಿದರು.

Related