ಕಾಂಗ್ರೆಸ್‌ನವರಿಗೆ ಬಿಜೆಪಿ ಶಾಸಕರ ಅಭಿವೃದ್ಧಿ ಸಹಿಸಲಾಗುತ್ತಿಲ್ಲ: ಮನೋಹರ್‌ರೆಡ್ಡಿ

ಕಾಂಗ್ರೆಸ್‌ನವರಿಗೆ ಬಿಜೆಪಿ ಶಾಸಕರ ಅಭಿವೃದ್ಧಿ ಸಹಿಸಲಾಗುತ್ತಿಲ್ಲ: ಮನೋಹರ್‌ರೆಡ್ಡಿ

ಕೆ.ಆರ್.ಪುರ: ಶಾಸಕ ಅರವಿಂದ ಲಿಂಬಾವಳಿ ಅವರ ಅಭಿವೃದ್ಧಿ ಸಹಿಸಲಾಗದೆ ಕಾಂಗ್ರೆಸ್‌ನವರು ಒಬ್ಬ ಮಹಿಳೆ ಮೂಲಕ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ಮಹದೇವಪುರ ನಗರ ಮಂಡಲ ಅಧ್ಯಕ್ಷ ಮನೋಹರ್‌ರೆಡ್ಡಿ ತಿಳಿಸಿದರು.

ಕೆ.ಆರ್.ಪುರ ಸಮೀಪದ ಮಾರತ್ತಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜಕಾಲುವೆ ಒತ್ತುವರಿ ಮಾಡಿಕೊಂಡು ನೂರಾರು ಮನೆಗಳಿಗೆ ನೀರು ನುಗ್ಗಲು ಕಾರಣರಾದ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ರುತ್ ಸಗಾಯಿ ಮೇರಿ ಪರ ಕಾಂಗ್ರೆಸ್ ನಿಂತು ಶಾಸಕ ಅರವಿಂದ ಲಿಂಬಾವಳಿ ತಪ್ಪು ಮಾಡಿದ್ದಾರೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸೋಮವಾರ ಮತ್ತು ಮಂಗಳವಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾರೀ ಮಳೆಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಹಲವಾರು ಕೆರೆಗಳು ಕೋಡಿ ಬಿದ್ದವು. ಹಲವು ವಸತಿ ಸಂಕೀರ್ಣಗಳ ಒಳಗೆ ನೀರು ನುಗ್ಗಿ ವಿದ್ಯುತ್ ಸಂಪರ್ಕ ಕಡಿತವಾಯಿತು. ಕುಡಿಯುವ ನೀರಿಗೂ ಸಮಸ್ಯ ಉಂಟಾಯಿತು.

ಈ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಮಂಗಳವಾರದಂದು ವರ್ತೂರು ಕೋಡಿಯ ಟಿ ಝಡ್ ವಸತಿ ಸಮುಚ್ಚಯದಲ್ಲಿ ಪರಿವೀಕ್ಷಣೆ ನಡೆಸಿದರು. ಈ ವೇಳೆ ಸರ್ವೇ ನಂ.18 ರಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದನ್ನು ಗಮನಿಸಿ ಸದರಿ ಸೈಟಿನ ಕಾಂಪೌಂಡ್ ಮೇಲೆ ಕಂದಾಯ ಅಧಿಕಾರಿಗಳು ಗುರುತು ಮಾಡಿಸಿದ್ದರು ಎಂದರು.

ಗುರುವಾರ ಮುಖ್ಯಮಂತ್ರಿಯವರು ಸ್ಥಳ ವೀಕ್ಷಣೆಗೆ ಬರುವ ಮುನ್ನ ಅರವಿಂದ ಲಿಂಬಾವಳಿರವರು ಮತ್ತೆ ಅದೇ ಸ್ಥಳದಲ್ಲಿ ಸಂತ್ರಸ್ತ ನಾಗರೀಕರ ಜೊತೆ ಮಾಹಿತಿ ಸಂಗ್ರಹ ಮಾಡುತ್ತಿರುವಾಗ ಒತ್ತುವರಿ ಕಾಂಪೌಂಡ್ ನಿರ್ಮಿಸಿದ್ದ ಪ್ರಭು ಎಂಬಾತ ಬಂದು ಇಲ್ಲಸಲ್ಲದ ವಾದ ಮಾಡತೊಡಗಿದರು. ಶಾಸಕರು ನಡೆದು ಬರುತ್ತಿರುವಾಗ ಅವರ ಪತ್ನಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಸಗಾಯಿ ಮೇರಿ ಎಂಬುವರು ಕೌಂಪೌಂಡ್‌ ನ್ನು ಯಾವುದೇ ನೋಟಿಸ್ ನೀಡದೆ ಒಡೆದಿದ್ದೀರಿ ಎಂದು ಕಿರುಚಾಡಿದಳು.

ಶಾಸಕರು ವಿನಂತಿಯ ನಡುವೆಯೂ ಆಕೆ ತನ್ನಲ್ಲಿದ್ದ ಯಾವುದೇ ದಾಖಲಾತಿಯನ್ನು ತೋರಿಸದೆ ಕೂಗಾಡುತ್ತಿದ್ದರು. ಸುಮಾರು 12 ಅಡಿ ಜಾಗ ಒತ್ತುವರಿ ಮಾಡಿಕೊಂಡಿದ್ದು ಖಚಿತವಾಗಿದ್ದು, ಅಲ್ಲಿದ್ದ ಪೊಲೀಸ್ ಮಹಿಳಾ ಸಿಬ್ಬಂದಿ ಕರೆಸಿ ಚೀರಾಡುತ್ತಿದ್ದ ಮಹಿಳೆಯನ್ನು ಕರೆದೊಯ್ಯಲು ತಿಳಿಸಿದ್ದರು. ಘಟನೆ ದಿನವೇ ಕಂದಾಯ ಅಧಿಕಾರಿ ಪಾರ್ಥಸಾರಥಿ ಅವರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಎರಡು ದಿನ ಬಳಿಕ ಕಾಂಗ್ರೆಸ್‌ನವರ ಕುತಂತ್ರದಿಂದ ಶಾಸಕರ ಮೇಲೆ ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಸತ್ಯಾಂಶಗಳನ್ನು ಅರಿಯದೆ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಪ್ರಚಾರ ವಾಗುತ್ತಿದೆ ಇದು ನಿಲ್ಲಬೇಕು ಸಾರ್ವಜನಿಕರು ಸತ್ಯ ಅರಿಯಬೇಕು ಎಂದುಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಮಹಿಳಾ ಅಧ್ಯಕ್ಷೆ ಪುಷ್ಪ, ಮುಖಂಡರಾದ ಜಯಚಂದ್ರರೆಡ್ಡಿ, ಸುರೇಶ್, ರಾಜೇಶ್, ಲೋಕೇಶ್ ಮತ್ತಿತರರಿದ್ದರು.

 

Related