ನೀರಿನ ಹಗರಣ ತನಿಖೆಗೆ ಸಮಿತಿ ರಚನೆ

ನೀರಿನ ಹಗರಣ ತನಿಖೆಗೆ ಸಮಿತಿ ರಚನೆ

ಯಾದಗಿರಿ : ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ ಹಗರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚನೆ ಮಾಡಲಾಗುವುದು. ಎರಡು ತಿಂಗಳ ಒಳಗಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಇಂದು ವಿಧಾನಸಭಾ ಅಧಿವೇಶನದಲ್ಲಿ ತಿಳಿಸಿದರು.

ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದರು ಯಾವುದೇ ಘಟಕಗಳು ಕಾರ್ಯನಿರ್ವಹಿಸದೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಬಗ್ಗೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸದನದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿರುವ ಒಟ್ಟು 123 ಘಟಕಗಳ ಪೈಕಿ,94 ಘಟಕಗಳು ಚಾಲ್ತಿಯಲ್ಲಿದ್ದು, ಉಳಿದ 29 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆ ಎಂದು ಉತ್ತರಿಸಿದರು.

ಈ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಶಾಸಕರು ಹೇಳಿದಂತೆ ನೀರಿನ ಘಟಕಗಳ ಅಳವಡಿಕೆಯಲ್ಲಿ ಹಗರಣವಾಗಿದ್ದು, ನಾನು ಕೂಡ ಅನೇಕ ಬಾರಿ ಭೇಟಿ ಮಾಡಿದ ಸಂದರ್ಭದಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿದ್ದು ಕಂಡಿದ್ದೇನೆ. ಹೆಚ್ಚಿನ ಹಣ ವೆಚ್ಚ ಮಾಡಿ ಒಂದಕ್ಕಿAತ ನಾಲ್ಕು ಪಟ್ಟು ಹೆಚ್ಚಿನ ಹಣ ವೆಚ್ಚ ಮಾಡಿ ಈ ಹಿಂದಿನ ಸರ್ಕಾರ ಘಟಕ ಅಳವಡಿಸಿದೆ. ಯಾರುಯಾರು ಎಷ್ಟು ಲೂಟಿ ಮಾಡಿ ಅವ್ಯವಹಾರ ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ತನಿಖೆ ಮಾಡಿಸುತ್ತೇನೆ. ತನಿಖಾ ವರದಿಯನ್ನು ಸದನದಲ್ಲಿ ಮಂಡಿಸುತ್ತೆನೆ. ಜಂಟಿ ಸದನ ಸಮಿತಿ ರಚನೆ ಮಾಡಿ ಸಮಗ್ರ ತನಿಖೆ ಮಾಡಿಸಲಾಗುತ್ತದೆ ಎಂದು ಹೇಳಿದರು.

Related