ನವೋದ್ಯಮಗಳಿಗೆ ಸುಗಮ ಸಾಲ: ಎಸ್‌ಬಿಐ ಜತೆ ಕೆ-ಡಿಇಎಂ ಒಡಂಬಡಿಕೆ

ನವೋದ್ಯಮಗಳಿಗೆ ಸುಗಮ ಸಾಲ: ಎಸ್‌ಬಿಐ ಜತೆ ಕೆ-ಡಿಇಎಂ ಒಡಂಬಡಿಕೆ

ಬೆಂಗಳೂರು, ಜು 08 : ನವೋದ್ಯಮಗಳಿಗೆ ಅಗತ್ಯವಾಗಿರುವ ಸಾಲಸೌಲಭ್ಯವನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಪ್ರತ್ಯೇಕವಾದಂತಹ ಬ್ಯಾಂಕ್ ಶಾಖೆಯನ್ನು ಎಸ್ ಬಿ ಐ ಆರಂಭಿಸುತ್ತಿದ್ದು ಈ ಸಂಬಂಧ ಬ್ಯಾಂಕ್ ನ ಅಧಿಕಾರಿಗಳು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) ಜತೆ ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದರು.

ನಗರದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಡಿಇಎಂ ಪರವಾಗಿ ಅದರ ಸಿಇಒ ಸಂಜೀವ್ ಗುಪ್ತ ಮತ್ತು ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಎಸ್.ರಾಧಾಕೃಷ್ಣನ್ ಅಂಕಿತ ಹಾಕಿ, ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ.

ಬೆಂಗಳೂರಿನ ಕೋರಮಂಗಲದಲ್ಲಿ ಎಸ್ ಬಿ ಐ, ನವೋದ್ಯಮಿಗಳ ಸಲುವಾಗಿ ಪ್ರತ್ಯೇಕ ಶಾಖೆ ತೆರೆಯುತ್ತಿದ್ದು, ಇದನ್ನು ಆಗಸ್ಟ್ ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

‘ಕೇಂದ್ರ ಸರಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಸೌಲಭ್ಯವನ್ನು ಖಾತ್ರಿಪಡಿಸಲು ರೂಪಿಸಿರುವ ಸಿಜಿಟಿಎಸ್‌ಎಂಇ ಯೋಜನೆಯಡಿ ಒಂದು ಸಂಸ್ಥೆಗೆ ತಲಾ 2 ಕೋಟಿ ರೂ.ವರೆಗೂ ಸಾಲ ಸಿಗುತ್ತಿದೆ. ಇದನ್ನು ಬಳಸಿಕೊಂಡು, ರಾಜ್ಯದಲ್ಲಿ ನವೋದ್ಯಮಗಳಿಗೆ ಈ ನೆರವು ಒದಗಿಸಲು ತೀರ್‍ಮಾನಿಸಲಾಗಿದೆ’ ಎಂದರು.

ರಾಜ್ಯದಲ್ಲಿ ಒಟ್ಟು 13 ಸಾವಿರ ನವೋದ್ಯಮಗಳಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳಿಗೆ ಹಣಕಾಸು ನಿಧಿಯ ಕೊರತೆ ಉಂಟಾಗುತ್ತದೆ. ಇದನ್ನು ಪರಿಹರಿಸಿ, ಸುಗಮ ಸಾಲ ಸಿಗುವಂತೆ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಎಸ್‌ಬಿಐ ಮುಂದಿನ ಆರು ತಿಂಗಳಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಕ್ಲಸ್ಟರ್ ಗಳಲ್ಲಿ ಕೆಡಿಇಎಂ ಜತೆಗೂಡಿ ಇಂಥದೇ ಶಾಖೆಗಳನ್ನು ತೆರೆಯಲಿದೆ ಎಂದು ಅವರು ತಿಳಿಸಿದರು.

Related