ಸಿಎಂ ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾಗಿ

  • In State
  • July 22, 2022
  • 188 Views
ಸಿಎಂ ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾಗಿ

ಬೆಂಗಳೂರು,ಜು.22- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಗೆ ತೆರಳಲಿದ್ದು, ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಔತಣಕೂಟ ಏರ್ಪಡಿಸಿದ್ದಾರೆ.

ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿರುವುದರಿಂದ ಬೊಮ್ಮಾಯಿ ಅವರು ತೆರಳುತ್ತಿದ್ದಾರೆ.

ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ಭಾನುವಾರ ಸಂಜೆ ಪುನಃ ನವದೆಹಲಿಗೆ ತೆರಳುವರು. ಸೋಮವಾರ ಸಂಸತ್‍ನ ದರ್ಬಾರ್ ಹಾಲ್‍ನಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

ಜು. 25ರಂದು (ಸೋಮವಾರ) ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ವಿವಿಧ ಇಲಾಖೆಗಳ ನಿಯೋಗಗಳೊಂದಿಗೆ ದೆಹಲಿ ತೆರಳುತ್ತಿದ್ದು, ಪಕ್ಷದ ವರಿಷ್ಠರು ಪ್ರಸ್ತಾಪಿಸಿದರೆ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚಿಸುವುದಾಗಿ ಸಿಎಂ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದೇ ವೇಳೆ ಪಶ್ಚಿಮಘಟ್ಟಗಳ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ನಿಯೋಗದ ನೇತೃತ್ವವನ್ನೂ ತಾನೇ ವಹಿಸುತ್ತಿರುವುದಾಗಿ ತಿಳಿಸಿದ್ದು, ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ಬಿಜೆಪಿ ಪಡಸಾಲೆಯಲ್ಲಿ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಬೊಮ್ಮಾಯಿ ಅವರು ದೆಹಲಿಗೆ ತೆರಳುತ್ತಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಗರಿಗೆದರಿದೆ. ಈ ಬಾರಿ ವಿಸ್ತರಣೆ ಅಥವಾ ಪುನರ್ರಚನೆ ಎರಡರಲ್ಲಿ ಯಾವುದೋ ಒಂದು ಆಗಿಯೇ ತೀರುತ್ತದೆ ಎಂಬ ವಿಶ್ವಾಸ ಹಲವು ಶಾಸಕರಲ್ಲಿ ಮೂಡಿದೆ.

ಬೊಮ್ಮಾಯಿ ಸಂಪುಟದಲ್ಲಿ ಒಟ್ಟು 5 ಸಚಿವ ಸ್ಥಾನಗಳು ಖಾಲಿ ಇದ್ದು, ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿದರೆ ಶೀಘ್ರವೇ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಆಗಲಿದೆ ಮೂಲಗಳು ಹೇಳಿವೆ.

 

Related