ಬದಲಾವಣೆಯತ್ತ ಬಿಟಿಎಂ

ಬದಲಾವಣೆಯತ್ತ ಬಿಟಿಎಂ

ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಯವರು ನನ್ನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಿ ಸುಳ್ಳು ಮೊಕದ್ದಮೆಗಳನ್ನು ಹಾಕಿಸಿರುವುದು ಬಿಟ್ಟರೆ ಕ್ಷೇತ್ರದ ಅಭಿವೃದ್ದಿಗೆ ಮಾಡಿರುವ ಕಾರ್ಯ ಶೂನ್ಯವೆಂದು ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿ ಗುಡುಗಿದರು.

ಇಂದು ಮಡಿವಾಳ ವಾರ್ಡ್ನ ಮದ್ದೂರಮ್ಮ ಕಾಲೋನಿಯಲ್ಲಿ ಮನೆ ಮನೆ ಪ್ರಚಾರ ಕೈಗೊಂಡ ಶ್ರೀಧರ್ ರೆಡ್ಡಿಯವರು ರಾಮಲಿಂಗಾರೆಡ್ಡಿಯವರು ಕ್ಷೇತ್ರದ ಅಭಿವೃದ್ದಿಯನ್ನು ಬಿಟ್ಟು ಗೃಹ ಸಚಿವರಾಗಿದ್ದಾಗ, 8 ತಿಂಗಳ ಕಾಲ ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಾರು ನಿಲ್ಲಬಾರದೆಂಬ ನಿಟ್ಟಿನಲ್ಲಿ ನನ್ನ ವಿರುದ್ದ ಹಲವಾರು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ, ಮದ್ದೂರಮ್ಮ ಕಾಲೋನಿಯಲ್ಲಿ ಯಾವುದೇ ಅಭಿವೃದ್ದಿ ಕರ‍್ಯಗಳು ಜರುಗಿಲ್ಲ. ಚುನಾವಣೆ ವೇಳೆ ಮಾತ್ರ ಶಾಸಕರು ಬರುತ್ತಾರೆ. ಇಲ್ಲಿ ಕುಡಿಯುವ ನೀರು, ರಸ್ತೆ, ಮೋರಿ ವ್ಯವಸ್ಥೆ ಇಲ್ಲವೆಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು. ಕ್ಷೇತ್ರದ ಜನತೆಗೆ ಈಗ ಸತ್ಯದ ಅರಿವಾಗಿದೆ ಎಂದು ಶ್ರೀಧರ್ ರೆಡ್ಡಿ ನುಡಿದರು.

ಇಲ್ಲಸಲ್ಲದ ಆರೋಪಗಳನ್ನು ಮಾಡಿ, ನನ್ನ ವಿರುದ್ದ ಎಷ್ಟು ಮಾತನಾಡಿದರೂ, ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ. ಸತತ 7 ವರ್ಷಗಳಿಂದ ಕ್ಷೇತ್ರದಲ್ಲಿ ಮಾಡಿರುವ ಸಮಾಜ ಸೇವೆ, ಬಿಜೆಪಿ ಪಕ್ಷ ಸಂಘಟನೆ ಇದೀಗ ನನಗೆ ಶ್ರೀರಕ್ಷೆಯಾಗಲಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಕೇವಲ ಬಡಾವಣೆಗಳಲ್ಲಿ ಮಾತ್ರ ಸೌಲಭ್ಯ ಕಲ್ಪಿಸಿರುವ ಶಾಸಕರು, ಕೊಳಚೆ ಪ್ರದೇಶಗಳಾದ ರಾಜೇಂದ್ರ ನಗರ, ಮದ್ದೂರಮ್ಮ ಕಾಲೋನಿ, ಸಿದ್ದಾಪುರ, ಸಿದ್ದಾರ್ಥ ಕಾಲೋನಿ, ಚಂದ್ರಪ್ಪ ನಗರ, ಮಹಾಲಿಂಗೇಶ್ವರ ಬಡಾವಣೆಗಳಲ್ಲಿ ಯಾವುದೇ ಮೂಲಭೂತ ಸೌರ‍್ಯಗಳಿಲ್ಲದೆ ಈಗಲೂ ಪ್ರತಿನಿತ್ಯ ನರಕವನ್ನು ನೋಡುತ್ತಿದ್ದಾರೆ. ಈ ಭಾರಿ ನನಗೆ ಅವಕಾಶ ದೊರಕಿ, ಮತದಾರರು ನನ್ನನ್ನು ಹರಸಿದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿರುವಂತಹ ಹಲವಾರು ಯೋಜನೆಗಳನ್ನು ನೇರವಾಗಿ ಬಡ ಜನತೆಯ ಮನೆಗೆ ತಲುಪಿಸುವ ಕೆಲಸ ಮಾಡುತ್ತೇನೆಂದು ಈ ಸಂದರ್ಭದಲ್ಲಿ ನುಡಿದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾರವರ ಪ್ರಚಾರದಿಂದ ಈ ಭಾರಿ ಬಿಟಿಎಂ ಕ್ಷೇತ್ರ ಬಿಜೆಪಿ ಪಾಲಾಗಲಿದೆ ಎಂದು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ಹಿಂದೆಂದೂ ಕಾಣದಂತೆ ಬಿಜೆಪಿ ಪಡೆ ಚುನಾವಣೆ ಸಿದ್ಧತೆ ನಡೆಸಿದೆ. “ಬದಲಾವಣೆಯತ್ತ ಬಿಟಿಎಂ” ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಂದ್ರ ರೆಡ್ಡಿ, ವಾರ್ಡ್ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಂಡು ಮತಯಾಚಿಸಿದರು.

Related