ಬಿಜೆಪಿ ಹುಟ್ಟಿನಿಂದಲೇ ರೈತ ವಿರೋಧಿ

ಬಿಜೆಪಿ ಹುಟ್ಟಿನಿಂದಲೇ ರೈತ ವಿರೋಧಿ

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆಇರುವ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ತರಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಯಾವ ನೈತಿಕತೆಯೂ ಇಲ್ಲ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು.

ಈ ತಿದ್ದುಪಡಿಗಳಿಂದ ರೈತರ ಕಲ್ಯಾಣವಾಗುತ್ತದೆ ಎಂಬ ಭರವಸೆ ಇದ್ದರೆ ಬಿ.ಎಸ್.ಯಡಿಯೂರಪ್ಪನವರು ಮೊದಲು ವಿಧಾನಸಭೆಯನ್ನು ವಿಸರ್ಜಿಸಿ ಇದೇ ವಿಷಯವನ್ನು ರಾಜ್ಯದ ಜನತೆಯ ಮುಂದಿಟ್ಟು ಚುನಾವಣೆಯನ್ನು ಎದುರಿಸಬೇಕು ಎಂದು ಸವಾಲು ಎಸೆದರು.

ಕೊರೊನಾ ಸಂಕಟದಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ರೈತರು ಬೀದಿಗೆ ಬರಲಾರರು ಎಂಬ ದುಷ್ಟ ಆಲೋಚನೆಯಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಮೀಲಾಗಿ ಈ ರೈತ ವಿರೋಧಿ ಮಸೂದೆಗಳನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿದೆ. ಆದರೆ ಇಡೀ ದೇಶದ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಬೀದಿಗೆ ಇಳಿದು ಭಾರತೀಯ ಜನತಾ ಪಕ್ಷದ ಹುನ್ನಾರವನ್ನು ವಿಫಲಗೊಳಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರು ಮಾತುಮಾತಿಗೆ ತಾನು ರೈತ ನಾಯಕನೆಂದು ಕರೆದುಕೊಳ್ಳುತ್ತಾರೆ. ಸಂಘ ಪರಿವಾರದ ಕೇಸರಿಶಾಲು ಕಿತ್ತುಹಾಕಿ ಹಸಿರು ಶಾಲು ಹೊದ್ದುಕೊಂಡು ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಹಸಿರು ಶಾಲಿನ ಒಳಗಿದ್ದ ರೈತ ವಿರೋಧಿ ಕೇಸರಿ ಶಾಲು ಹೊರಗೆ ಬಂದಿದೆ ಎಂದು ಹೆಳಿದರು.

ಸರ್ಕಾರ ದೂರಿದ ಸಿದ್ದರಾಮಯ್ಯ
ಭಾರತೀಯ ಜನತಾ ಪಕ್ಷ ಹುಟ್ಟಿನಿಂದಲೇ ರೈತ ವಿರೋಧಿ. ಅದು ಬಂಡವಾಳಿಗರು,ಉದ್ಯಮಿಗಳು ಮತ್ತು ವರ್ತಕರ ಪಕ್ಷ. ಈ ಪಕ್ಷದ ಡಿಎನ್‍ಎನಲ್ಲಿಯೇ ರೈತ ವಿರೋಧಿ ವಿಷ ಇದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ ಎಸಗಿತು, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ ಮಾಡಿದೆ, ಬೀಜ-ರಸಗೊಬ್ಬರ ಪೂರೈಕೆ ಮಾಡದೆ ರೈತರನ್ನು ಗೋಳುಹೊಯ್ಕೊಳ್ಳುತ್ತಾ ಇದೆ. ಬಿಜೆಪಿಗೆ ಯಾಕೆ ರೈತರ ಮೇಲೆ ದ್ವೇಷ? ಕರ್ನಾಟಕದ ಬಗ್ಗೆ ಯಾಕೆ ಸೇಡಿನ ಭಾವನೆ? ಎನ್ನುವ ಪ್ರಶ್ನೆಗೆ ರಾಜ್ಯದ ಜನತೆಗೆ ಈಗ ಉತ್ತರ ಸಿಕ್ಕಿದೆ.

Related