ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಬಿಜೆಪಿಯವರಿಲ್ಲ: ಡಿಸಿಎಂ

ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಬಿಜೆಪಿಯವರಿಲ್ಲ: ಡಿಸಿಎಂ

ದೆಹಲಿ: ನಾವು ಹೋರಾಟ ಮಾಡುತ್ತಿರುವುದನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಆದರೆ ಈ ಟೀಕೆ ಮಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಹೋರಾಟದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಟೀಕೆ ಟಿಪ್ಪಣಿಯನ್ನು ನಾವು ಸ್ವಾಗತಿಸುತ್ತೇವೆ. ಟೀಕೆ ಮಾಡುತ್ತಿರುವ ನಮ್ಮ ಬಿಜೆಪಿ ಸ್ನೇಹಿತರಿಗೆ ನಾನು ಕೇಳುವುದಿಷ್ಟೇ. ಜನ ನಿಮ್ಮ 26 ಸಂಸದರನ್ನು ಆರಿಸಿದ್ದಾರೆ. ನೀವು ಒಂದು ದಿನ ರಾಜ್ಯದ ಪರವಾಗಿ ಹೋರಾಟ ಮಾಡಲಿಲ್ಲ. ರಾಜ್ಯದ ಹಿತದ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲಿಲ್ಲ.

ಡಬಲ್ ಇಂಜಿನ್ ಸರ್ಕಾರ ಇದ್ದರೂ ಇಂಜಿನ್ ಗಳು ಫೇಲ್ ಆದವು. ಮುಖ್ಯಮಂತ್ರಿಗಳು ನಿಮ್ಮನ್ನು ಕರೆದುಕೊಂಡು ಹೋದರೂ ನೀವು ಸರ್ಕಾರದ ಮುಂದೆ ತುಟಿ ಬಿಚ್ಚಲಿಲ್ಲ. ಹೀಗಾಗಿ ಗಾಂಧಿ ಪ್ರತಿಮೆ ಮುಂದೆ ನಿಂತು ನೀವು ಪ್ರತಿಭಟನೆ ಮಾಡುವ ನೈತಿಕತೆ ನಿಮಗಿಲ್ಲ. ನಾವು ನಮ್ಮ ಜನರ ಬೆವರನ ಹಣ ಕೊಡಿ ಎಂದು ಕೇಳುತ್ತಿದ್ದೇವೆ. ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ಹೀಗಾಗಿ ನಾವು ನಮ್ಮ ಪಾಲನ್ನು ಕೇಳುತ್ತಿದ್ದೇವೆ ಎಂದರು.

ನಮ್ಮ ರಾಜ್ಯದಲ್ಲಿ ಬರ ಆವರಿಸಿದೆ. ನಮ್ಮ ಕೃಷಿ ಸಚಿವರು, ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬರದ ವಿಚಾರವಾಗಿ ವರದಿ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಯವರನ್ನು ಭೇಟಿ ಮಾಡಿ ಪರಿಹಾರ ಕೋರಿದ್ದಾರೆ. ಆದರೂ ಇದುವರೆಗೂ ನಯಾ ಪೈಸೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.

Related