ಡಿಕೆಶಿ​ಗೆ ಭರ್ಜರಿ ಗೆಲುವು

ಡಿಕೆಶಿ​ಗೆ ಭರ್ಜರಿ ಗೆಲುವು

ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾವುಕರಾದರು. ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಿದ್ದಕ್ಕೆ ಪಕ್ಷದ ನಾಯಕರು ಮತ್ತು ಕರ್ನಾಟಕದ ಜನತೆಗೆ ಧನ್ಯವಾದ ಹೇಳಿದ ಡಿಕೆಶಿ ಕಣ್ಣೀರಿಟ್ಟರು.

ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಂದಾಗಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆಶಿ ಜಯಶಾಲಿಯಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆಲುವಿನ ನಗೆ ಬೀರಿದ್ದಾರೆ.

ಡಿಕೆ ಶಿವಕುಮಾರ್ ಭಾವುಕ

ಕಾಂಗ್ರೆಸ್ ಭದ್ರಕೋಟೆಯಾಗಿರುವ ಕನಕಪುರದಲ್ಲಿ ಡಿಕೆ ಶಿವಕುಮಾರ್​ಗೆ ಟಕ್ಕರ್ ಕೊಡಲು ಬಿಜೆಪಿ ಸಚಿವ ಆರ್ ಅಶೋಕ್​ರನ್ನು ನಿಲ್ಲಿಸಿತ್ತು. ಆದ್ರೆ ಕನಕಪುರ ಮತದಾರರು ಹೊಸ ಅಭ್ಯರ್ಥಿ ಪರ ಒಲವು ತೋರಿಸಿಲ್ಲ. ಆರ್​ ಅಶೋಕ್ ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯ ಮಾಸ್ಟರ್ ಪ್ಲಾನ್​ಗಳೆಲ್ಲವೂ ತಲೆಗೆಳಗಾಗಿವೆ.

ಸದ್ಯ ಗೆಲುವಿನ ನಗೆ ಬೀರಿದ ಡಿಕೆ ಶಿವಕುಮಾರ್ ಫಲಿತಾಂಶ ಕಂಡು ಭಾವುಕರಾದ್ರು. ಜೈಲಿನಲ್ಲಿದ್ದ ದಿನಗಳನ್ನ ಮೆಲುಕು ಹಾಕಿ ಭಾವುಕರಾಗಿ ಕಣ್ಣೀರಿಟ್ಟರು. ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಅವರು ನೋಡೋಕೆ ಬಂದ ಸನ್ನಿವೇಶ ನೆನಪಿಸಿಕೊಂಡ ಭಾವುಕರಾದ್ರು.

ವಿಧಾನಸಭಾ ಕ್ಷೇತ್ರದಲ್ಲಿ 2,24,956 ಮತದಾರರಲ್ಲಿ 1,90,124 ಮತದಾನ ಮಾಡಿದ್ದರು. ಎರಡು ದಶಕಗಳ ಹಿಂದೆ ಜೆಡಿಎಸ್‌ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿಕೆ ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಸಾತನೂರಿನಿಂದ ಕನಕಪುರಕ್ಕೆ ಬಂದ ಡಿ.ಕೆ. ಶಿವಕುಮಾರ್, 2008ರಿಂದ ಇಲ್ಲಿಯವರೆಗೂ ಪ್ರತಿ ಚುನಾವಣೆಯಲ್ಲೂ ಗೆಲುವನ್ನು ತಮ್ಮದಾಗಿಸಿಕೊಂಡು ಬಂದಿದ್ದಾರೆ. ಡಿಕೆಶಿಗೆ ಎದುರಾಳಿಗಳೇ ಇಲ್ಲ.ಕಳೆದ ಹಲವು ವರ್ಷದಿಂದ ಸೋಲನ್ನೆ ಕಾಣದ ಡಿ.ಕೆ.ಶಿವಕುಮಾರ್ ಅವರಿಗೆ ಸಹೋದರ ಡಿ.ಕೆ.ಸುರೇಶ್ ಅವರು ಆನೆ ಬಲ ಇದ್ದಂತೆ.

 

 

Related