ಭಟ್ಕಳ; ಪ್ರವಾಹಕ್ಕೆ ಸಿಲುಕಿದವರಿಗೆ ವಿಶೇಷ ಅನುದಾನ

  • In State
  • August 4, 2022
  • 170 Views
ಭಟ್ಕಳ; ಪ್ರವಾಹಕ್ಕೆ ಸಿಲುಕಿದವರಿಗೆ ವಿಶೇಷ ಅನುದಾನ

ಕಾರವಾರ, ಆ04: “ಭಟ್ಕಳದಲ್ಲಿ ಭಾರೀ ಮಳೆಯಾಗಿ ಹಾನಿಗೊಳಗಾಗಿರುವ ಪ್ರವಾಹ ಪೀಡಿತ ಪ್ರದೇಶದ ಮನೆಗಳಿಗೆ ಈಗಾಗಲೇ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಅಂಗಡಿ ಹಾಗೂ ಮೀನುಗಾರರ ಬೋಟ್‌ಗಳಿಗೆ ವರದಿ ಪಡೆದು ವಿಶೇಷ ಅನುದಾನ‌ ಒದಗಿಸುವುದಾಗಿ” ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿಗಳು ಬುಧವಾರ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿದ್ದ ಭಟ್ಕಳದ ಮುಟ್ಟಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, “ಭಟ್ಕಳ ಪಟ್ಟಣ ಹಾಗೂ ಮುಟ್ಟಳ್ಳಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮೇಘಸ್ಫೋಟಗೊಂಡ ಕಾರಣ ಭಾರೀ ಮಳೆಯಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇವೆ” ಎಂದರು.

“ಚಿರೆಕಲ್ಲು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿದು ಮೇಲ್ನೋಟಕ್ಕೆ ಅವಘಡ ಸಂಭವಿಸಿರುವುದು ಕಂಡುಬಂದಿದೆ. ಈ ಪ್ರದೇಶದಲ್ಲಿ ಜಿಯೋಲಾಜಿಕಲ್ ಸರ್ವೇ ನಡೆಸಿ ಇನ್ನು ಯಾವ ಮನೆಗಳಿಗೆ ತೊಂದರೆ ಆಗಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ನಂತರ ಹಾನಿಗೊಳಗಾದ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡಲು ಮೊದಲು ಕ್ರಮ ಕೈಗೊಳ್ಳುವುದಾಗಿ” ತಿಳಿಸಿದರು.

ಭಟ್ಕಳದಲ್ಲಿ ಧಾರಾಕಾರವಾಗಿ ಸುರಿದ ‌ಮಳೆಯಿಂದಾಗಿ ಮನೆ, ಸಾವಿರಕ್ಕೂ ಹೆಚ್ಚು ಅಂಗಡಿಗಳು, ನೂರಾರು ಬೋಟ್‌ಗಳು, ರಸ್ತೆ, ಸೇತುವೆಗಳಿಗೆ ಜಲಾವೃತವಾಗಿರುವ ಮಾಹಿತಿ ಇದೆ.‌ ಪ್ರಾಥಮಿಕ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.‌ ಅಲ್ಲದೆ ಜಿಲ್ಲಾಡಳಿತದ ಬಳಿ 38 ಕೋಟಿ ರೂಪಾಯಿ ಹಣ ಇದ್ದು, ಎನ್‌ಡಿಆರ್‌ಎಫ್ ಮೂಲಕ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಕ್ರಮ‌ಕೈಗೊಳ್ಳಬೇಕು” ಎಂದು ಮುಖ್ಯಮಂತ್ರಿಗಳು ಸೂಚಿಸಿದರು. “ನೆರೆ ನೀರು ನುಗ್ಗಿ ಹಾನಿಗೊಳಗಾಗಿರುವ ಅಂಗಡಿಗಳಿಗೆ ವಿಶೇಷ ಅನುದಾನ‌ ಅಗತ್ಯ ಇದೆ. ಹಾನಿಗೊಳಗಾದ ಬಗ್ಗೆ ವರದಿ ಕಳುಹಿಸಿದರೆ ಅನುಮೋದನೆ ನೀಡಿ ಪರಿಹಾರ ಒದಗಿಸಲಾಗುವುದು” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Related