ಬಿಬಿಎಂಪಿ ದಕ್ಷಿಣ ವಲಯ: ಬೇಸಿಗೆ ಶಿಬಿರ ಕಾರ್ಯಕ್ರಮ

ಬಿಬಿಎಂಪಿ ದಕ್ಷಿಣ ವಲಯ: ಬೇಸಿಗೆ ಶಿಬಿರ ಕಾರ್ಯಕ್ರಮ

ಬೆಂಗಳುರು: ನಗರದಲ್ಲಿರುವ ಬಿಬಿಎಂಪಿ ಶಾಲಾ-ಕಾಲೇಜುಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಾಗಬಾರದೆಂಬ ಉದ್ದೇಶದಿಂದ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹಲಾವಾರು ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರವು ಕೆಲಸ ಮಾಡಲಾಗುತ್ತಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ತಿಳಿಸಿದರು.

ಚಿನ್ನಯ್ಯನ ಪಾಳ್ಯದಲ್ಲಿರುವ ಬಿಬಿಎಂಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ದಕ್ಷಿಣ ವಲಯದ ವತಿಯಿಂದ 17-04-23 ರಿಂದ 28-04-2023 ರವೆರೆಗೆ ಅಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ(ಚಿಣ್ಣರ ಸಂಭ್ರಮ) ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪಾಲಿಕೆ ವತಿಯಿಂದ ಅನೇಕ ಮೂಲಭೂತ ಸೌಲಭ್ಯಗಳನ್ನು ನೀಡಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿ ಗುಣಮಟ್ಟ ಶಿಕ್ಷವನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಆಧುನಿಕ ಶಿಕ್ಷಣ ನೀಡುವ ಸಲುವಾಗಿ ಸ್ಮಾರ್ಟ್ ಕ್ಲಾಸ್ ಮಾಡಲು ಮುಂದಾಗಲಾಗುತ್ತಿದೆ ಎಂದರು.

ಪಾಲಿಕೆಯ ಶಾಲೆಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾಭ್ಯಾಸದಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಆಯಾ ಸ್ಥಳೀಯ ಪ್ರದೇಶದಲ್ಲಿ, ಕೊಳಗೇರಿ ಪ್ರದೇಶಗಳಿಗೆ ತೆರಳಿ ಶಾಲೆಯಿಂದ ಹೊರಗುಳಿದ ಮಕ್ಕಳ ಪೋಷಕರ ಬಳಿ ಪಾಲಿಕೆಯಿಂದ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಮನವರಿಕೆ ಮಾಡುವ ಕೆಲಸ ಮಾಡಬೇಕೆಂದು ಸೂಚಿಸಿದರು.

ಈ ವೇಳೆ ಬಿಬಿಎಂಪಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕೇಶ್, ಶೈಕ್ಷಣಿಕ ಸಲಹೆಗಾರರಾದ ಬಿ.ಕೆ ಬಸವರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related