ಆಶಾ ಕಾರ್ಯಕರ್ತೆಗೆ ಕೊರೋನಾ

ಆಶಾ ಕಾರ್ಯಕರ್ತೆಗೆ ಕೊರೋನಾ

ಸಾವಳಗಿ : ಸಮೀಪದ ತೊದಲಬಾಗಿ ಗ್ರಾಮದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತೆ ಒಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ ಹಾಗು ಗ್ರಾಮ ಪಂಚಾಯತ್ ಅಧಿಕಾರಿಗಳು ಗ್ರಾಮ ಛಾವಡಿ ಓಣಿಯನ್ನು ಸೀಲ್‌ಡೌನ್ ಮಾಡಿದರು.

ಕಳೆದ ಮೂರು ತಿಂಗಳಿನಿಂದ ಕೊರೋನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು ನೆಗಡಿ, ಜ್ವರ ಹಾಗು ಕೆಮ್ಮಿನಿಂದ ಬಳಲುತ್ತಿದ್ದರು. ಜಮಖಂಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಕೊರೋನಾ ಗುಣಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಜು.15 ರಂದು ಪರೀಕ್ಷಾ ವರದಿಯಲ್ಲಿ ಕೊರೋನಾ ಪಾಸಿಟೀವ್ ಧೃಡವಾಗಿದೆ.

ಅವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ 8 ಜನರನ್ನು ಹೋಂ ಕ್ವಾರೆಂಟೈನನಲ್ಲಿರಲು ಸೂಚಿಸಿದ್ದು ಎಲ್ಲರನ್ನು ಡಾ. ಪ್ರಕಾಶ ಹುಗ್ಗಿ ನೇತೃತ್ವದ ತಂಡ ಸ್ಕ್ರೀನಿಂಗ್ ಮಾಡಿ ತಪಾಸಣೆ ನಡೆಸಿದರು. ಇನ್ನು ದ್ವಿತೀಯ ಸಂಪರ್ಕದಲ್ಲಿದ್ದ 50 ಜನರನ್ನು ಕೂಡಾ ತಪಾಸಣೆ ನಡೆಸಿದರು. ಕೆಮ್ಮು, ಜ್ವರ, ನೆಗಡಿ ಕಂಡುಬಂದರೆ ಕೂಡಲೆ ಆಸ್ಪತ್ರೆಗೆ ಭೇಟಿ ನೀಡಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಉಪತಹಶೀಲ್ದಾರ ವೈ.ಎಚ್.ದ್ರಾಕ್ಷಿ, ಪಿಡಿಓ ನಂಜಯ್ಯನ ಮಠ, ವೈದ್ಯ ಡಾ. ಪ್ರಕಾಶ ಹುಗ್ಗಿ, ಲೆಕ್ಕಾಧಿಕಾರಿ ಎಸ್.ಎಮ್.ಜಂಗಮಶೆಟ್ಟಿ ಇದ್ದರು.

Related