ಸಿ.ಎಂ ಮನೆಗೆ ಮುತ್ತಿಗೆ ಯತ್ನ..

ಸಿ.ಎಂ ಮನೆಗೆ ಮುತ್ತಿಗೆ ಯತ್ನ..

ಬೆಂಗಳೂರು, ಜು 11 :  ಕಬ್ಬು ಬೆಳೆಗಾರರು ತಮ್ಮ ಬಹುದಿನಗಳ ಬೇಡಿಕೆ ಈಡೇರಿಸುವಂತೆ, ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರ‍್ಯಾಲಿಯಲ್ಲಿ ಸಿ.ಎಂ. ಮನೆಯತ್ತ ಹೊರಟ ರೈತರನ್ನು ದಾರಿಮಧ್ಯೆ ತಡೆದು ಪೊಲೀಸರು ವಶಕ್ಕೆ ಪಡೆದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಅವಕಾಶವಿಲ್ಲ, ಅಗತ್ಯವಾದರೆ, ಫ್ರೀಡಂಪಾರ್ಕ್ ಬಳಿ ಧರಣಿ ನಡೆಸಿ ಎಂದು ಪೊಲೀಸರು ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ರೈತರು ಪೊಲೀಸರ ಮಾತಿಗೆ ಕಿವಿಗೊಡದೆ ಮುತ್ತಿಗೆ ಹಾಕಲು ಮುಂದಾದಾಗ ವಶಕ್ಕೆ ಪಡೆದರು.

ಕಬ್ಬು ಬೆಳೆಗಾರರ ಬಾಕಿ ಹಣ, ತೂಕದಲ್ಲಿ ಮೋಸ ತಡೆಗಟ್ಟುವುದು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ, ರೈತರು ಸಿ.ಎಂ. ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿ, ಬೆಂಗಳೂರಿನಲ್ಲಿ ಜಮಾಯಿಸಿದ್ದರು. ರೈತ ಮುಖಂಡರನ್ನು ಬಂಧಿಸಿ, ಕರೆದೊಯ್ದ ಕ್ರಮದಿಂದ ರೈತರು ಸಿಟ್ಟಿಗೆದ್ದು, ಕೆಲಹೊತ್ತು ಅಲ್ಲಿಯೇ ಕುಳಿತು ಪ್ರತಿಭಟಿಸಿದರು.

Related