ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ಪೂರೈಕೆ : ಅಶ್ವತ್ಥನಾರಾಯಣ

ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ಪೂರೈಕೆ : ಅಶ್ವತ್ಥನಾರಾಯಣ

ಬೆಂಗಳೂರು, ಜೂ 28 :  ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ಉತ್ಪಾದಕನನ್ನಾಗಿ ಮಾಡುವ ದಿಸೆಯಲ್ಲಿ ಅವಕಾಶಗಳನ್ನು ಸೃಷ್ಟಿಸುವುದೇ ಸರ್ಕಾರದ ಗುರಿಯಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.

ಕೌಶಲ್ಯ ಕರ್ನಾಟಕ ಮತ್ತು ದೇಶಪಾಡೆ ಫೌಂಡೇಷನ್ ವತಿಯಿಂದ ಐಟಿ/ಐಟಿಇಎಸ್ ವಲಯದ ಉದ್ಯಮ ನಾಯಕರು ಮತ್ತು ನವೋದ್ಯಮಿಗಳೊಂದಿಗೆ ಕರ್ನಾಟಕವನ್ನು ಕೌಶಲ್ಯ ಪೂರ್ಣವಾಗಿಸುವುದು ಕುರಿತು ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಮತನಾಡಿದ ಅವರು, ಉದ್ಯಮ ವಲಯದೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯಾಚರಸಲು ಸರ್ಕಾರ ಒತ್ತು ನೀಡಲಿದೆ ಎಂದರು.

ಹಿತಾಸಕ್ತಿದಾರರೊಂದಿಗೆ ಸಮಾಲೋಚಿಸಿ ಮುನ್ನಡೆಯಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಸರ್ಕಾರವು ಯಾವುದೇ ಅಧಿಕಾರದ ಹಸ್ತಕ್ಷೇಪ ನಡೆಸದೇ ಸುಗಮ ಕಾರ್ಯನಿರ್ವಹಣೆಗೆ ಆನುವು ಮಾಡಿಕೊಡಲಿದೆ. ಉದ್ಯೋಗ, ಕೌಶಲ್ಯ, ಉದ್ಯಮಶೀಲತೆ ಹೀಗೆ ಎಲ್ಲ ವಲಯಗಳಲ್ಲೂ ತರಬೇತಿ ಕೊಡುವ ಯೋಜನೆ ಹೊಂದಿದೆ ಎಂದು ವಿವರಿಸಿದರು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದೆ ಎಂದ ಅವರು, ಇದೇ ವೇಳೆ ಪ್ರತಿಯೊಂದು ಕಂಪನಿಯೂ ಸರ್ಕಾರದ ‘ಸ್ಕಿಲ್ ಪೋರ್ಟಲ್’ಗೆ ನೋಂದಣಿಯಾಗಬೇಕು. ಹೀಗಾದಾಗ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಎಲ್ಲೆಲ್ಲಿವೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಅದನ್ನು ಆಧರಿಸಿ ಉದ್ಯೋಗಾಕಾಂಕ್ಷಿಗಳು ಶುಲ್ಕಾಧಾರಿತ ತರಬೇತಿ, ಉಚಿತ ತರಬೇತಿ, ಸರ್ಕಾರಿ ತರಬೇತಿ ಯಾವುದನ್ನು ಬೇಕಾದರೂ ಪಡೆದುಕೊಳ್ಳಬಹುದು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಕೂಡ ಕೌಶಲಗಳಿಗೆ ಒತ್ತು ಕೊಡುತ್ತದೆ.  ನಾವು ರಾಜ್ಯದಲ್ಲಿ ಎನ್ ಇ ಪಿ ಅಳವಡಿಸಿರುವ ಮಾದರಿಯನ್ನು ದೇಶದ ಬೇರೆ ರಾಜ್ಯಗಳು ಅನುಸರಿಸುತ್ತಿವೆ. ನಾವು ಅನುಷ್ಠಾನಗೊಳಿಸಿದ ಎಲ್ಎಂಎಸ್ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಕಲಿಕಾ ರೀತಿ ಸಂಪೂರ್ಣ ಬದಲಾಗಿದೆ. ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಆರೋಗ್ಯ ಮತ್ತು ಸ್ವಾಸ್ಥ್ಯ, ಇವುಗಳನ್ನು ಕಡ್ಡಾಯಗೊಳಿಸಲಾಗಿದೆ.

 

Related