ಆಧ್ಯಾತ್ಮಿಕ ಸೇವೆಗೆ ಶ್ಲಾಘನೆ

ಆಧ್ಯಾತ್ಮಿಕ ಸೇವೆಗೆ ಶ್ಲಾಘನೆ

ಕೆಂಭಾವಿ : ಪ್ರತಿ ಹುಣ್ಣಿಮೆ ಶಿವಾನುಭವ ಗೋಷ್ಠಿ ಏರ್ಪಡಿಸಿ ಈ ಭಾಗದ ಸದ್ಭಕ್ತರಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ಪಸರಿಸುತ್ತಿರುವ ಕರಡಕಲ್ ಪೂಜ್ಯರ ಸೇವೆ ಅನನ್ಯ ಎಂದು ಸಮಾಜ ಸೇವಕಿ ಹಾಗೂ ಬೆಂಗಳೂರಿನ ಸುಮನಾ ಫೌಂಡೇಶನ್ ಅಧ್ಯಕ್ಷೆ ಡಾ.ಸುನಿತಾ ಮಂಜುನಾಥ ಹೇಳಿದರು.

ಪಟ್ಟಣದ ಸಮೀಪ ಕರಡಕಲ್ ಗ್ರಾಮದಲ್ಲಿ ಸಿದ್ಧ ಪರ್ವತದ ಬಗಳಾಂಬದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಪ್ರತ್ಯಾಂಗಿರಾ ಹೋಮ, ಕ್ಯಾಲೆಂಡರ್ ಬಿಡುಗಡೆ, 238 ನೇ ಶಿವಾನುಭವ ಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆಗೆ ಮನಸೋತ ಯುವಜನತೆ ಆಧ್ಯಾತ್ಮಕತೆಯಿಂದ ದೂರ ಸರಿಯುತ್ತಿದ್ದಾರೆ. ಕೆಟ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಮಠವನ್ನು ಕಟ್ಟಿ ಗ್ರಾಮೀಣ ಜನತೆಗೆ ಆಧ್ಯಾತ್ಮಿಕ ಸೇವೆಯನ್ನು ಪೂಜ್ಯರು ಮಾಡುತ್ತಿದ್ದಾರೆ. ಇಂತಹ ರಾತ್ರಿ ಸಮಯದಲ್ಲೂ ಇಷ್ಟೊಂದು ಜನ ಸೇರಿರುವುದು ಪೂಜ್ಯರ ಮೇಲಿರುವ ಗೌರವಕ್ಕೆ ಸಾಕ್ಷಿ ಎಂದರು.

ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ ಕಲ್ಲೂರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಮಠ ಮಾನ್ಯಗಳು ಅನನ್ಯ ಸೇವೆ ಸಲ್ಲಿಸುತ್ತಿವೆ. ಸಾವಿರಾರು ಜನರಿಗೆ ತ್ರಿವಿಧ ದಾಸೋಹ ನೀಡುತ್ತಿವೆ. ಧರ್ಮದ ಜೊತೆಯಲ್ಲಿ ಮಾನವೀಯತೆ ಮೌಲ್ಯಗಳನ್ನು ಬಿತ್ತುತ್ತಿವೆ ಎಂದರು.

ಶ್ರೀ ಮಠದ ಪೂಜ್ಯ ಶಾಂತರುದ್ರಮುನಿ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೈತ ಸೇನೆಯ ರಾಜ್ಯ ಉಪಾಧ್ಯಕ್ಷ ಕಾಂತುಗೌಡ ಪಾಟೀಲ, ಮಂಜುನಾಥ ಜಾಲಹಳ್ಳಿ, ಪ್ರದೀಪಕುಮಾರ ಕದರಾಪೂರ, ಬಸವರಾಜ ಅಂಗಡಿ, ವಿರೇಶರೆಡ್ಡಿ ದೇಸಾಯಿ, ಜಗದೀಶ ಪಾಟೀಲ, ಮಲ್ಲು ಬಾದ್ಯಾಪುರ, ಪವನ ಕುಲಕರ್ಣಿ , ಮಠದ ವಕ್ತಾರ ಶಿವಪ್ರಕಾಶ ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಪರಸನಹಳ್ಳಿ ಇದ್ದರು.

Related