ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸರ್ಕಾರದ ಮುಖ್ಯ ಗುರಿ: ಸಚಿವ ಬಿ.ನಾಗೇಂದ್ರ

ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸರ್ಕಾರದ ಮುಖ್ಯ ಗುರಿ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಬಳ್ಳಾರಿಯಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ನಗರದ ವಿಮ್ಸ್ ಮೈದಾನದಲ್ಲಿ(ಇಂದು) ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ವಿವಿಧ ತಂಡಗಳ ಪಥಸಂಚಲನ ವೀಕ್ಷಿಸಿ ಮತ್ತು ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ ಬಳ್ಳಾರಿ ಜಿಲ್ಲೆಯು ಇಂದು ವಿವಿಧ ಇಲಾಖೆಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ದಾಖಲಿಸುತ್ತಾ ಮುನ್ನಡೆದಿದ್ದೇವೆ ಎಂದರು.

ಬಳ್ಳಾರಿ ಜಿಲ್ಲೆಯ ಭೌಗೋಳಿಕ ಕ್ಷೇತ್ರವು 4,00,043 ಹೆಕ್ಟೇರ್ ಇದ್ದು, ಇದರಲ್ಲಿ ಸಾಗುವಳಿ ಕ್ಷೇತ್ರವು 2,78,227 ಹೆಕ್ಟೇರ್ ಇದೆ. ಇದರಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಕ್ಷೇತ್ರವು 64,953 ಹೆಕ್ಟೇರ್ ಪ್ರದೇಶವು ಮಳೆಯಾಶ್ರಿತ ಹಾಗೂ 1,08,943 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 303 ಮಿ.ಮೀ. ಮಳೆಯಾಗಿಬೇಕಾಗಿದ್ದು, ವಾಸ್ತವವಾಗಿ 220 ಮಿ.ಮೀ. ಮಳೆಯಾಗಿದೆ. ಇಲ್ಲಿಯವರೆಗೂ 71,268 ಹೆಕ್ಟೇರ್‍ಗಳ ಪ್ರದೇಶದಲ್ಲಿ ಬಿತ್ತನೆಯಾಗಿದೆ ಅಂದರೆ ಶೇ.40.98ರಷ್ಟು ಆಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ, ಮೆಕ್ಕಜೋಳ ಸಜ್ಜೆ, ನವಣೆ, ಬೆಳೆಗಳ ಬಿತ್ತನೆ ಪ್ರಗತಿಯಲ್ಲಿದೆ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ಭತ್ತ ನಾಟಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಹೇಳಿದರು.

ಸಮರ್ಪಕ ಬಿತ್ತನೆ ಬೀಜ ಪೂರೈಕೆ ಮತ್ತು ವಿತರಣೆ

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 9111 ಕ್ಟಿಂಟಾಲ್‍ಗಳ ಕಾರ್ಯಕ್ರಮ ಗುರಿಯಿದ್ದು, ಸದರಿ ಹಂಗಾಮಿನಲ್ಲಿ 3985 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ 18,521 ರೈತರಿಗೆ ವಿತರಿಸಲಾಗಿದೆ. ಬೀಜ ವಿತರಣೆ ಕಾರ್ಯಕ್ರಮವೂ ಮುಂದುವರೆದಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)

ಜಿಲ್ಲೆಯಲ್ಲಿ 2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 1117 ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು ನಿರ್ಮಾಣ ಹಾಗೂ 58 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 2,67,155 ಮಾನವ ದಿನಗಳನ್ನು ಸೃಜಿಸಿ ಆರ್ಥಿಕ ಒಟ್ಟು ರೂ.776.67 ಲಕ್ಷಗಳ ವೆಚ್ಚವನ್ನು ಭರಿಸಿಲಾಗಿದೆ ಎಂದು ಹೇಳಿದರು.

ಬೆಳೆ ಸಮೀಕ್ಷೆ

ಬೆಳೆ ಸಮೀಕ್ಷೆಯು ಮಹಾತ್ವಕಾಂಕ್ಷಿ ಯೋಜನೆಯಾಗಿದ್ದು, ದೇಶದಲ್ಲೇ ಪ್ರಪ್ರಥಮ ಬಾರಿಗೆ ರೈತರೆ ಸ್ವತಃ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು 2023-24ನೇ ಸಾಲಿನಲ್ಲಿ “Farmers Crop Survey App 2023-24” ಮೂಲಕ ಅಪ್‍ಲೋಡ್ ಮಾಡಲು ಸ್ವಾಭಿಮಾನಿ ರೈತರಿಗೆ ಸುವರ್ಣಾವಕಾಶವನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಖಾಸಗಿ ನಿವಾಸಿಗಳ ಸಹಾಯದಿಂದ ರೈತರು ಬೆಳೆ ಸಮೀಕ್ಷೆ ಉತ್ಸವದಲ್ಲಿ ಪಾಲ್ಗೊಂಡು 2023-24ನೇ ಸಾಲಿನಲ್ಲಿ ಒಟ್ಟು 3,80,888 ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಚಿತ್ರವನ್ನು ಮೊಬೈಲ್ ಆಪ್‍ನಲ್ಲಿ ಬೆಳೆಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.

ಬೆಳೆ ವಿಮೆ

ಜಿಲ್ಲೆಗೆ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿಯಲ್ಲಿ 1766 ಫಲಾನುಭವಿಗಳಿಗೆ ಬೆಳೆ ವಿಮೆ ಪರಿಹಾರ ರೂ.426.61 ಲಕ್ಷ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಖನಿಜ ಪ್ರತಿಷ್ಟಾನದಿಂದ ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಬದ್ಧ

ರಾಜ್ಯ ಸರ್ಕಾರವು 2016ನೇ ಸಾಲಿನಲ್ಲಿ ಡಿ.ಎಂ.ಎಫ್ ನಿಯಮಗಳಂತೆ ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್‍ನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ರೂ.2270.46 ಕೋಟಿಗಳ ಮೊತ್ತವನ್ನು ಡಿ.ಎಂ.ಎಫ್ ವಂತಿಗೆಯಾಗಿ ಸಂಗ್ರಹವಾಗಿದೆ. ಈವರೆಗೂ 6 ಕ್ರಿಯಾ ಯೋಜನೆಗಳಲ್ಲಿನ ಕಾಮಗಾರಿಗಳಿಗೆ ಒಟ್ಟು ರೂ.1593.68 ಕೋಟಿ ಅನುಮೋದಿಸಿ, ಒಟ್ಟು 1407 ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಒಟ್ಟು ರೂ.597.93 ಕೋಟಿಗಳ ಮೊತ್ತ ವೆಚ್ಚ ಮಾಡಲಾಗಿದೆ. ಸದರಿ ಕಾಮಗಾರಿಗಳಲ್ಲಿ 989 ಕಾಮಗಾರಿಗಳು ಪೂರ್ಣಗೊಂಡಿದ್ದು, 169 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಹಾಗೂ 77 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಅವರು ತಿಳಿಸಿದರು.

ಅನುಮೋದಿಸಲಾದ ಕ್ರಿಯಾ ಯೋಜನೆಗಳಲ್ಲಿ ಆರೋಗ್ಯ ವಲಯಕ್ಕೆ ರೂ. 200.01 ಕೋಟಿ, ಕುಡಿಯುವ ನೀರಿನ ವಲಯಕ್ಕೆ ರೂ.383.00 ಕೋಟಿ, ಶೈಕ್ಷಣಿಕ ವಲಯಕ್ಕೆ ರೂ.247.80 ಕೋಟಿ, ಮೂಲಭೂತ ಸೌಕರ್ಯಗಳಿಗೆ ರೂ.448.14 ಕೋಟಿ, ನೀರಾವರಿ ಮತ್ತು ನೈರ್ಮಲ್ಯ ವಲಯಕ್ಕೆ ಒಟ್ಟು ರೂ.147.07 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಅಭಿವೃದ್ಧಿ, ಕೌಶ್ಯಲಾಭಿವೃಧ್ದಿ ವಲಯ, ಪರಿಸರ ರಕ್ಷಣೆ ಮತ್ತು ಇತರೆ ವಲಯಗಳಿಗೆ ಸೇರಿ ಒಟ್ಟು ರೂ.167.53 ಕೋಟಿಗಳ ಮೊತ್ತದ ವಿವಿಧ ಕಾಮಗಾರಿಗಳನ್ನು ಅನುಮೋದಿಸಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

ಡಿ.ಎಂ.ಎಫ್ ಅಡಿಯಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಎಲ್ಲಾ ವಿಭಾಗದಲ್ಲಿಯೂ ಮೇಲ್ದರ್ಜೆಗೆ ಏರಿಸುವ ಕಾಯಕಲ್ಪ ಯೋಜನೆ, ಕಂಪ್ಲಿ ಹಾಗೂ ಕುರುಗೋಡು ತಾಲ್ಲೂಕು ಕೇಂದ್ರಗಳಲ್ಲಿ ರೂ.40 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಮಿಸುವ ಕಾಮಗಾರಿಗಳು, ಉಳಿದ ಆಸ್ಪತ್ರೆಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳನ್ನು ಮತ್ತು ಅಂಬುಲೆನ್ಸ್ ನೀಡುವ ಯೋಜನೆ, ಸಂಗನಕಲ್ಲು ಎಸ್.ಟಿ.ಪಿ ಉನ್ನತೀಕರಣ, ಬಳ್ಳಾರಿ ನಗರದಲ್ಲಿ ಆರೋಗ್ಯ ಸೌಧ ನಿರ್ಮಾಣ, ವಿವಿಧ ಶಾಲಾ ಮತ್ತು ಕಾಲೇಜುಗಳ ಉನ್ನತೀಕರಣ, ಸಂಡೂರು ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

Related