ಕರಾಟೆ ಶಿಕ್ಷಣ ಕಡ್ಡಾಯಗೊಳಿಸಲು ಸಲಹೆ

ಕರಾಟೆ ಶಿಕ್ಷಣ ಕಡ್ಡಾಯಗೊಳಿಸಲು ಸಲಹೆ

ಕೋಲಾರ: ದೇಹದ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಕರಾಟೆ ಕಲೆ ಅತಿಮುಖ್ಯ ಎಂದು ಕವಿ ಡಾ. ಶರಣಪ್ಪ ಗಬ್ಬೂರ್ ಅಭಿಪ್ರಾಯಪಟ್ಟರು.
ಬಂಗಾರಪೇಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕರಾಟೆಯ ಬ್ರೂಸ್ಲೀ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಹದ ಆತ್ಮ ರಕ್ಷಣೆಗಾಗಿ ಇಂದು ಕರಾಟೆ ಅನಿವಾರ್ಯವಾಗಿದೆ. ಅಂಗಾಂಗಳ ಬೆಳವಣಿಗೆಗಳಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಹಾಗೂ ಹಿರಿಯರ ಬುದ್ಧಿ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳನ್ನು ಕರಾಟೆಗೆ ತೊಡಗಿಸುವುದರಿಂದ ಅವರಲ್ಲಿ ಗ್ರಹಿಕಾ ಶಕ್ತಿ ಅಭಿವೃದ್ಧಿ ಹೊಂದುತ್ತದೆ. ಇಂದು ಕ್ರೀಡೆ ವಿನಾಶದ ಅಂಚಿನಲ್ಲಿ ಇದೆ ಅದನ್ನು ಉಳಿಸುವ ಪ್ರಯತ್ನ ನಾವೆಲ್ಲರೂ ಮಾಡಬೇಕು. ಇದನ್ನು ಮುಂಬರುವ ದಿನಗಳಲ್ಲಿ ಸರ್ಕಾರ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರೀಡೆಯಾಗಿ ಜಾರಿಗೆ ತರಬೇಕೆಂದರು.
ಜಪಾನ್ ಶಿಟೋರಾಯ್ ಕರಾಟೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ವೆಂಕಟರಾಮ್ ಮಾತನಾಡಿ ಪ್ರತಿ ಊರಿನಲ್ಲಿ ಇಂತಹ ತರಬೇತಿ ಕೇಂದ್ರಗಳು ಸ್ಥಾಪನೆಗೊಳ್ಳಬೇಕು. ಎಳೆಯ ವಯಸ್ಸಿನ ಹುಡುಗ ಹುಡುಗಿಯರಿಗೆ ಕರಾಟೆ ಕಲಿಸುವುದು ಪೋಷಕರ ಮೊದಲ ಆಯ್ಕೆಯಾಗಬೇಕು. ಕರಾಟೆಯನ್ನು ಸಂಪೂರ್ಣವಾದ ಕ್ರೀಡೆಯಲ್ಲ ಎಂದು ಭಾವಿಸಿ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಯಲ್ಲಿ ಸೇರಿಸಿಲ್ಲದಿರುವುದು ನೋವಿನ ಸಂಗತಿ ಎಂದರು.
ಆತ್ಮ ವಿಶ್ವಾಸ ವೇದಿಕೆಯ ರಾಜ್ಯಾಧಕ್ಷರಾದ ಎಂ.ಎನ್ ಭಾರದ್ವಾಜ ಮಾತನಾಡಿ ಕರಾಟೆ ಕಲೆ ಆತ್ಮರಕ್ಷಣೆಗಾಗಿ ಬಹು ಉಪಯೋಗವಾಗಿದೆ. ತಮಿಳುನಾಡಿನಲ್ಲಿ ಶಾಲಾ ಹಂತದಲ್ಲೇ ಮಕ್ಕಳಿಗೆ ಕರಾಟೆಯನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲಿನ ಸರ್ಕಾರ ಕೂಡ ಮಕ್ಕಳಿಗೆ ಕರಾಟೆ ಕಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ದಕ್ಷಿಣ ಭಾರತದಲ್ಲಿ ಇತ್ತೀಚಿಗೆ ಹೆಣ್ಣು ಮಕ್ಕಳು ಕರಾಟೆ ಕಲಿಕೆಗೆ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.

Related