ಉತ್ತಮ ಬೆಂಗಳೂರಿಗಾಗಿ ಎಎಪಿ ತ್ರಿವರ್ಣ ಸಂಭ್ರಮ

  • In State
  • August 10, 2022
  • 219 Views
ಉತ್ತಮ ಬೆಂಗಳೂರಿಗಾಗಿ ಎಎಪಿ ತ್ರಿವರ್ಣ ಸಂಭ್ರಮ

ಬೆಂಗಳೂರು ಆ 10: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಭ್ರಷ್ಟಾಚಾರ ಮುಕ್ತ ಬೆಂಗಳೂರು ಎಂಬ ಘೋಷವಾಕ್ಯದೊಂದಿಗೆ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ‘ತ್ರಿವರ್ಣ ಸಂಭ್ರಮ’ ಬೈಕ್‌ ರ‍್ಯಾಲಿಗೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಚಾಲನೆ ನೀಡಿದರು. ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ತ್ರಿವರ್ಣ ಧ್ವಜ ಸಹಿತ ಆಗಮಿಸಿದ್ದ ನೂರಾರು ದ್ವಿಚಕ್ರ ವಾಹನಗಳು ರ‍್ಯಾಲಿ ಆರಂಭಿಸಿದವು. ಕಾರ್ಯಕರ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಅಧಿಕಾರದಲ್ಲಿರುವ ರಾಜ್ಯ ಬಿಜೆಪಿ ಸರ್ಕಾರವು ಅವ್ಯಾಹತವಾಗಿ ಭ್ರಷ್ಟಾಚಾರ ನಡೆಸಿದೆ. ಈ ಕಾರಣದಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ರೂ. ಹಣ ಬಿಡುಗಡೆಯಾದರೂ ಜನರ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ. ಜನರ ತೆರಿಗೆ ಹಣವು ಜನಪ್ರತಿನಿಧಿಗಳ ಜೇಬು ಸೇರುತ್ತಿದ್ದು, ಬಿಜೆಪಿ ನಾಯಕರು ತಾವು ಮಾತ್ರ ಅಭಿವೃದ್ಧಿ ಹೊಂದುತ್ತಿದ್ದಾರೆ. ಬೆಂಗಳೂರಿನ ಜನತೆಯು ಈ ಭ್ರಷ್ಟ ವ್ಯವಸ್ಥೆಗೆ ಬದಲಾವಣೆ ತರುವ ಸಂಕಲ್ಪ ಮಾಡುವ ಸಮಯ ಬಂದಿದೆ,” ಎಂದು ಬಿಬಿಎಂಪಿ ಚುನಾವಣೆ ಕುರಿತು ಅವರು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್‌ ಮಾತನಾಡಿ, “ಇಂದು ಆರಂಭವಾದ ಬೈಕ್‌ ರ‍್ಯಾಲಿಯು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ವರೆಗೆ ರ‍್ಯಾಲಿ ಮುಂದುವರಿಯಲಿದೆ,” ಎಂದರು.

ಆಗಸ್ಟ್ 15ರಂದು ಬನ್ನಪ್ಪ ಪಾರ್ಕ್‌ನಲ್ಲಿ ಸಮಾರೋಪ ಸಮಾರಂಭ ನಡೆಸಿ ರ‍್ಯಾಲಿಯನ್ನು ಮುಕ್ತಾಯಗೊಳಿಸಲಾಗುವುದು. ಅಲ್ಲಿಯವರೆಗೆ ಈ ರ‍್ಯಾಲಿ ಮೂಲಕ ಬೆಂಗಳೂರಿನಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರ, ಬಿಜೆಪಿ ದುರಾಡಳಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು. ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಸರ್ಕಾರಿ ಕಚೇರಿಗಳಲ್ಲಿ ಸಣ್ಣ ಸೇವೆ ಪಡೆಯಲು ಕೂಡ ಲಂಚ ನೀಡಬೇಕಾದ ವಾತಾವರಣವನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ನಿರ್ಮಿಸಿವೆ ಎಂದರು.

Related