ಆಧಾರ್ ಕಾರ್ಡ್ ಗಾಗಿ ನಿತ್ಯವೂ ಪರದಾಟ

ಆಧಾರ್ ಕಾರ್ಡ್ ಗಾಗಿ ನಿತ್ಯವೂ ಪರದಾಟ

ಮುದ್ದೇಬಿಹಾಳ : ಸರಕಾರದ ಹಲವು ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರದಿದ್ದರೂ ಅಗತ್ಯ ಎಂಬ ಕಾರಣಕ್ಕಾಗಿ ಹಲವು ದೋಷಗಳನ್ನು ಹೊಂದಿರುವ ಕಾರ್ಡ್ನ ತಿದ್ದುಪಡಿ ಸಲುವಾಗಿ ಜನರ ಪರದಾಟ.

ಪಟ್ಟಣದ ತಹಶೀಲ್ದಾರ್ ಕಚೇರಿಗೆ ನಿತ್ಯವೂ ಬೆಳಗ್ಗೆಯೇ ಜನರು ಗುಂಪು ಗುಂಪಾಗಿ ಆಧಾರ್ ಕಾರ್ಡ್ ಸಂಬಂಧಿ ವಿವಿಧ ಕೆಲಸಗಳಿಗಾಗಿ ಬರುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ನೋಂದಣಿ, ತಿದ್ದುಪಡಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಆಧಾರ್ ಕಾರ್ಡ್ನ ನೋಂದಣಿ, ತಿದ್ದುಪಡಿ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ.

ತಹಸೀಲ್ದಾರ್ ಕಚೇರಿಯ ಎದುರಿಗೆ ತಾಲೂಕಿನ ಕುಂಚಗನೂರ, ಚವನಬಾವಿ ಸೇರಿದಂತೆ ನಗರದ ನಿವಾಸಿಗಳು ಬೆಳಗ್ಗೆ 5 ಗಂಟೆಗೂ ಮುಂಚೆ ಬಂದು ಕಚೇರಿ ಎದುರಿಗೆ ಕಾಯುತ್ತಿದ್ದಾರೆ.

ಸಾಮಾಜಿಕ ಅಂತರವನ್ನು ಮರೆತು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಕಾರ್ಯ ಮಾಡುವುದರಿಂದ ಎಲ್ಲಿಂದಲೋ ಬಂದವರಲ್ಲಿ ಸೋಂಕು ಇರುವುದನ್ನು ತಳ್ಳಿ ಹಾಕಲಾಗದು. ಇಡೀ ಸಮುದಾಯಕ್ಕೆ ಕೊರೋನಾ ಆತಂಕ ವಿದ್ದು ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು.

ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ವೇಳೆ ಆಗುತ್ತಿರುವ ಗದ್ದಲ ನೋಡಿದರೆ ಕೊರೋನಾ ವೈರಸ್ ಭಯ ಇವರಿಗಿಲ್ಲವೇ ಎಂಬ ಆತಂಕ ಕಾಡುತ್ತದೆ. ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳುತ್ತಿದ್ದ ಸರಕಾರ ಇಂದು ಸಾಮಾಜಿಕ ಅಂತರವನ್ನು ಮರೆತು ಗುಂಪು ಗೂಡುವುದಕ್ಕೆ ಆಸ್ಪದ ಕೊಡುತ್ತಿದೆ. ಇಂತಹದ್ದನ್ನು ನಿಲ್ಲಿಸುವ ಕೆಲಸ ಆಗಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡುವುದಕ್ಕೆ ಸೂಚಿಸಬೇಕು.

Related