ಭಾರತಕ್ಕೆ ಸರಣಿ ಸೋಲು

ಭಾರತಕ್ಕೆ ಸರಣಿ ಸೋಲು

ಕ್ರೖಸ್ಟ್ಚರ್ಚ್, ಮಾ. 3 : ಆತಿಥೇಯ ನ್ಯೂಜಿಲೆಂಡ್ ತಂಡದ ಪ್ರಬಲ ನಿರ್ವಹಣೆ ಎದುರು ಮತ್ತೊಮ್ಮೆ ಮುಗ್ಗರಿಸಿದ ಪ್ರವಾಸಿ ಭಾರತ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ಗಳಿಂದ ಶರಣಾಯಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 0-2ರಿಂದ ಸೋಲು ಕಂಡಿತು. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಭಾರತಕ್ಕಿದು ಸತತ 2ನೇ ಸೋಲು ಮತ್ತು ಮೊದಲ ಸರಣಿ ಸೋಲಾಗಿದೆ.
ಟಿ20 ಸರಣಿಯಲ್ಲಿ 5-0 ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಕಿವೀಸ್ ಪ್ರವಾಸವನ್ನು ಆರಂಭಿಸಿದ್ದ ಭಾರತ ತಂಡ ಏಕದಿನ ಸರಣಿಯಲ್ಲಿ 0-3ರಿಂದ ವೈಟ್ವಾಷ್ ಮುಖಭಂಗಕ್ಕೀಡಾಗಿತ್ತು. ಇದೀಗ ಟೆಸ್ಟ್ ಸರಣಿಯಲ್ಲೂ ಆತಿಥೇಯರ ವೇಗದ ದಾಳಿಗೆ ತತ್ತರಿಸಿದ ವಿರಾಟ್ ಕೊಹ್ಲಿ ಬಳಗ ನ್ಯೂಜಿಲೆಂಡ್ ಪ್ರವಾಸವನ್ನು ನಿರಾಶಾ ದಾಯಕವಾಗಿ ಮುಗಿಸಿದೆ.
ಹ್ಯಾಗ್ಲೆ ಓವಲ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯ ದಲ್ಲಿ ಭಾರತ ನೀಡಿದ 132 ರನ್ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, 36 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಕಿವೀಸ್ ವೇಗದ ದಾಳಿಗೆ ತತ್ತರಿಸಿದ ಭಾರತ ತಂಡ ಬೆಳಗ್ಗೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಕೇವಲ 124 ರನ್ಗಳಿಗೆ 2ನೇ ಇನಿಂಗ್ಸ್ ಮುಗಿಸಿತ್ತು. ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ನಡುವೆಯೂ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಲು ವಿಫಲವಾಯಿತು.
ಆತಿಥೇಯ ವೇಗಿಗಳ ಸವಾಲನ್ನು ದಿಟ್ಟವಾಗಿ ಎದುರಿಸಲು ವಿಫಲವಾದ ವಿಶ್ವ ನಂ. 1 ಟೆಸ್ಟ್ ತಂಡವಾಗಿರುವ ಭಾರತ, ಕೇವಲ ಎರಡೂವರೆ ದಿನಗಳಲ್ಲೇ ಶರಣಾಯಿತು. ವೇಗಿ ಮೊಹಮದ್ ಶಮಿ ಬ್ಯಾಟಿಂಗ್ ವೇಳೆ ಆದ ಗಾಯದಿಂದಾಗಿ ಭೋಜನ ವಿರಾಮದ ಬಳಿಕ ಬೌಲಿಂಗ್ಗೆ ಇಳಿಯಲಿಲ್ಲ. ಕಿವೀಸ್ ಮೊದಲ ಇನಿಂಗ್ಸ್ನಲ್ಲಿ ಬಾಲಂಗೋಚಿಗಳನ್ನು ಬೇಗನೆ ಕಟ್ಟಿ ಹಾಕಿ ಭಾರತ ತಂಡ 60-80 ರನ್ಗಳ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದ್ದರೆ, ಸವಾಲಿನ ಗುರಿ ನೀಡಿ ಪಂದ್ಯ ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಲಭಿಸುತ್ತಿತ್ತು. ಸೋಲಿನ ನಡುವೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ನ್ಯೂಜಿಲೆಂಡ್ ತಂಡ 180 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದೆ.

Related