ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದ ಪ್ರಮುಖ ಹಾಗೂ ಐತಿಹಾಸಿಕ ಹಬ್ಬವಾದ ಕರಗ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇಂದು (ಮಂಗಳವಾರ ಮಾರ್ಚ್ 31) ರಂದು ದ್ರೌಪದಿ ದೇವಿ ಹಸಿ ಕರಗ ಶಕ್ತ್ಯೋತ್ಸವ ಪ್ರಾರಂಭವಾಗಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಜನ ಸೇರಿದ್ದಾರೆ ಕೇವಲ ಬೆಂಗಳೂರು ಮಾತ್ರವಲ್ಲದೆ ಹೊರರಾಜ್ಯದಿಂದಲೂ ಕೂಡ ಜನ ಆಗಮಿಸಿದ್ದಾರೆ.
ಹೌದು, ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದರ ಮೊದಲ ಭಾಗವಾಗಿ ಇಂದು ಬೆಳಗ್ಗೆ ಸಂಪಂಗಿ ರಾಮನಗರದಲ್ಲಿರುವ ಸಂಪಂಗಿಕೆರೆಯ ಶಕ್ತಿಪೀಠದಲ್ಲಿ ಹಸಿ ಕರಗ ಶಕ್ತ್ಯೋತ್ಸವ ಅದ್ಧೂರಿಯಾಗಿ ಜರುಗಿದೆ. ಎ. ಜ್ಞಾನೇಂದ್ರ ಸ್ವಾಮಿಯವರು 16ನೇ ಬಾರಿಗೆ ಯಶಸ್ವಿಯಾಗಿ ಹಸಿ ಕರಗವನ್ನು ಹೊತ್ತಿದ್ದು, ರಾಜಬೀದಿಗಳಲ್ಲಿ ಸಂಚರಿಸಿ ಜಿಬಿಎ ಮುಖ್ಯ ಕಚೇರಿ ತಲುಪಿದರು. ಇದನ್ನೂ ಓದಿ: ಸಿಟಿಗಳಲ್ಲಿ ಸೌದೆಗಳನ್ನ ಎಲ್ಲಿಂದ ತರೋದು? ಕೇಂದ್ರ ಬಿಜೆಪಿಗೆ ಡಿಕೆಶಿ
ಇನ್ನು ಪೂಜೆ ಸಲ್ಲಿಸಿ, ಕೆ.ಆರ್. ಮಾರುಕಟ್ಟೆ ರಸ್ತೆಯ ಮೂಲಕ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿದ್ದಾರೆ. ನಾಳೆ (ಬುಧವಾರ ಏ. 01) ಮಧ್ಯರಾತ್ರಿ ಚೈತ್ರ ಪೌರ್ಣಮಿಯಂದು ಹೂವಿನ ಕರಗದ ರೂಪದಲ್ಲಿ ಹೊರಬಂದು ಕೆಂಪೇಗೌಡರು ನಿರ್ಮಿಸಿರುವ 25 ಪೇಟೆಗಳಲ್ಲಿ ಲಕ್ಷಾಂತರ ಜನರಿಗೆ ದರ್ಶನ ನೀಡುತ್ತಾರೆ. ನಂತರ ನಾಡಿದ್ದು ಬೆಳಗ್ಗೆ 6 ಗಂಟೆಯ ಒಳಗಾಗಿ ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪುತ್ತಾರೆ. ಈ ಮೂಲಕ ಮೂರು ದಿನಗಳ ಕರಗ ಮಹೋತ್ಸವ ಸಂಪನ್ನಗೊಳ್ಳಲಿದೆ.
