ಬೆಂಗಳೂರು: ಚೊಚ್ಚಲ ಚುನಾವಣೆಯಲ್ಲಿಯೇ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ತಮಿಳುನಾಡಿನಲ್ಲಿ ನಟ ವಿಜಯ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹಠ ಬಿಡದೆ ಮುಂದೆ ಸಾಗಿರುವ ತಮಿಳುನಾಡಿನ ಸಿಎಂ ದಳಪತಿ ವಿಜಯ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ತಿಳಿಸಿದ್ದಾರೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ ಸಿಎಂ ವಿಜಯ್ಗೆ ಕರೆ ಮಾಡಿ ಶುಭ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ನಾನು ಸಿದ್ದರಾಮಯ್ಯ ಮಾತಾಡ್ತಿದ್ದೀನಿ. ಇತಿಹಾಸ ಸೃಷ್ಟಿ ಮಾಡಿದ ನಿಮಗೆ ಅಭಿನಂದನೆಗಳು. ಬೆಂಗಳೂರಿಗೆ ಬಂದಾಗ ಇಬ್ಬರು ಭೇಟಿಯಾಗೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣವೇ ಅತ್ಯಂತ ಪ್ರಬಲ ಅಸ್ತ್ರ: ಮಧು ಬಂಗಾರಪ್ಪ
ಅಲ್ಲದೆ ತಮಿಳುನಾಡಿನ ಸಿಎಂ ದಳಪತಿ ವಿಜಯ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಎಕ್ಸ್ ನಲ್ಲೂ ಕೂಡ ಹಂಚಿಕೊಂಡು ಶುಭ ತಿಳಿಸಿದ್ದಾರೆ. ಸಿನಿಮಾ ಪ್ರಪಂಚದಿಂದ ಜನಸೇವೆಯತ್ತ ಗಮನಾರ್ಹ ಪ್ರಜಾಪ್ರಭುತ್ವ ಪ್ರಯಾಣ ಬೆಳೆಸುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಶೀ ಜೋಸೆಫ್ ವಿಜಯ್ ಅವರಿಗೆ ಅಭಿನಂದನೆಗಳು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಜನರ ಅಭಿವೃದ್ಧಿ, ಸಾಂಸ್ಕೃತಿಕ ಬಾಂಧವ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ. ತಮಿಳುನಾಡಿನ ಜನರ ಸೇವೆಯಲ್ಲಿ ಯಶಸ್ವಿ ಮತ್ತು ಪರಿವರ್ತನಾತ್ಮಕ ಆಡಳಿತ ನೀಡಲು ಶುಭಾಶಯ ತಿಳಿಸಿದ್ದಾರೆ.
