ದೆಹಲಿ: ರಾಜ್ಯ ರಾಜಕೀಯದಲ್ಲಿ ಕುರ್ಚಿ ಕೆಸರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಡಿಕೆ ಬ್ರದರ್ಸ್ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಮೇಲ್ನೋಟಕ್ಕೆ ಮಾತ್ರ ಸರ್ಕಾರದ ಕೆಲವು ಕಾರ್ಯಗಳ ಕುರಿತಾಗಿ ಮಾತುಕತೆಗೆ ಹೋಗಿದ್ದೇವೆ ಎಂದು ಡಿಕೆ ಬ್ರದರ್ಸ್ ಹೇಳಿದ್ದಾರೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ನ ಘಟಾನುಘಟಿ ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತಿರುವ ಹಿಂದಿನ ಉದ್ದೇಶವೇ ಬೇರೆ ಇರಬಹುದು ಎನ್ನಲಾಗುತ್ತಿದೆ.
ಇನ್ನು ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮೇ ಮೊದಲನೇ ವಾರದಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಪ್ರಮುಖ ನಿರ್ಧಾರಗಳು ಹೊರಬೀಳಲಿದೆ ಎನ್ನಲಾಗುತ್ತಿದೆ. ರಾಜ್ಯ ನಾಯಕರನ್ನು ಹೈಕಮಾಂಡ್ ದೆಹಲಿಗೆ ಕರೆದು ಮಾತುಕತೆ ನಡೆಸಬಹುದು ಎಂದು ಡಿಕೆ ಸಹೋದರರು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಆ ಭೇಟಿಯ ಪೂರ್ವಭಾವಿಯಾಗಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಅಭಿನಂದನೆ ಸಲ್ಲಿಸಿದ ಮಾದಿಗ ಸಮುದಾಯದ ನಾಯಕರು
ಸಂಪುಟ ವಿಸ್ತರಣೆ ಅಥವಾ ಪುನರಚನೆಗಿಂತ ಮೊದಲು ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಆಗಬೇಕು ಎಂಬ ಪ್ರಸ್ತಾಪವನ್ನು ಡಿಕೆ ಬಣ ಮುಂದಿಡುತ್ತಿದೆ. ಇತ್ತ ಸಿಎಂ ಬಣ ಕೂಡ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಹೈಕಮಾಂಡ್ ಕರೆದರೆ ಮುಂದಿನ ತಂತ್ರಗಾರಿಕೆ ಏನು ಎಂಬುದರ ಬಗ್ಗೆ ಸಿದ್ಧತೆ ನಡೆಸುತ್ತಿದೆ.
ಹಾಗಾದ್ರೆ ಮೇ ಮೊದಲನೇ ವಾರದಲ್ಲಿ ರಾಜ್ಯ ರಾಜಕೀಯದಲ್ಲಿ ಯಾವೆಲ್ಲಾ ಬದಲಾವಣೆ ಕಾಣಲಿವೆ ಎಂದು ಕಾದು ನೋಡಬೇಕಿದೆ.
