ಬೆಂಗಳೂರು: ನನ್ನನ್ನು ಬಂಧಿಸುವುದರಿಂದ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ‘ಖಾಲಿ ಪೆಟ್ಟಿಗೆ’ ಅಸಲಿಯತ್ತನ್ನು ಮತ್ತು ಸತ್ಯವನ್ನು ಬಯಲಿಗೆಳೆದಿದ್ದಕ್ಕಾಗಿ ನನ್ನನ್ನು ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಮೆಟ್ರೋ ದರ ಏರಿಕೆಯನ್ನು ಖಂಡಿಸಿ ಇಂದು (ಸೋಮವಾರ ಫೆ. 09) ಆರ್ವಿ ಮೆಟ್ರೋ ನಿಲ್ದಾಣದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರದ ಶಾಸಕ ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ನಡೆಸಬಾರದು ಎಂದು ಪೊಲೀಸರು ಮುನ್ನೆಚ್ಚರಿಕೆ ನೋಟಿಸ್ ನೀಡಿದ್ದರೂ ಬಿಜೆಪಿ ಕಾರ್ಯಕರ್ತರು ಇಂದು ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ ಖಾಲಿ ಟ್ರಂಕ್ ಹಿಡಿದುಕೊಂಡು ಆಗಮಿಸಿದ ತೇಜಸ್ವಿ ಸೂರ್ಯ, ಟ್ರಂಕ್ ತೆರದು “ರಾಜ್ಯ ಸರ್ಕಾರ ಖಾಲಿಯಾಗಿದೆ” ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಮೆಟ್ರೋ ದರ, ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರು ಇದರ ಬೆಲೆ ತೆರುತ್ತಿದ್ದಾರೆ. ಇನ್ನು ನೆಪಗಳು ನಡೆಯುವುದಿಲ್ಲ. ಮುಖ್ಯಮಂತ್ರಿಗಳು ಬಜೆಟ್ನಲ್ಲಿ ‘ಶ್ವೇತಪತ್ರ’ ಹೊರಡಿಸಬೇಕು, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕು.
ಹದಿನಾರನೇ ಹಣಕಾಸು ಆಯೋಗದ ಮುಂದೆ ನೀವೇ ಒಪ್ಪಿಕೊಂಡಂತೆ, ರಾಜ್ಯದ ಆರ್ಥಿಕ ಸ್ಥಿತಿ ಏಕೆ ದುರ್ಬಲವಾಗಿದೆ?
ಕರ್ನಾಟಕದಲ್ಲಿ ಜೀವನ ನಿರ್ವಹಣೆ ಏಕೆ ಇಷ್ಟೊಂದು ದುಬಾರಿಯಾಗುತ್ತಿದೆ?
ರಾಜ್ಯ ಸರ್ಕಾರ ಪ್ರತಿದಿನ ಬೆಲೆಗಳನ್ನು ಏಕೆ ಹೆಚ್ಚಿಸುತ್ತಿದೆ?
ಆರ್ಥಿಕತೆಯನ್ನು ಸರಿಪಡಿಸಿ, ಮೆಟ್ರೋಗೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ಪುನಃಸ್ಥಾಪಿಸಿ, ಆಗ ಮೆಟ್ರೋ ದರಗಳು ತಾನಾಗಿಯೇ ಇಳಿಯುತ್ತವೆ. ಇದನ್ನು ಬಿಟ್ಟು ಬೇರೇನು ಮಾಡಿದರೂ ಅದು ಕೇವಲ ವಂಚನೆಯಷ್ಟೆ ಎಂದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣಾ ಪೂರ್ವಭಾವಿ ಸಭೆ
