ಹಾಸನ: ವರ್ಷದಲ್ಲಿ ಕೇವಲ 15 ದಿನಗಳ ಮಾತ್ರ ದರ್ಶನಕ್ಕೆ ಅವಕಾಶ ಕರುಣಿಸುವ ಶಕ್ತಿ ದೇವತೆ ಹಾಸನಾಂಬೆಯ ದೇವಸ್ಥಾನಕ್ಕೆ ಸಾವಿರಾರು ಭಕ್ತಾದಿಗಳು ಈ ಬಾರಿ ಭೇಟಿ ನೀಡಿ ಪಾವನರಾಗಿದ್ದಾರೆ.
ಹೌದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಸನಾಂಬೆಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಇನ್ನು ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಇಂದು (ಗುರುವಾರ ಅ. 23) ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇಂದು ಬೆಳಗ್ಗೆವರೆಗೂ ಹಾಸನಾಂಬ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಕಡೆಗಳಿಗೆಯಲ್ಲೂ ಭಕ್ತಗಣ ಹಾಸನಾಂಬ ದೇವಿಯನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜಿತಾ, ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಬಾಗಿಲು ಮುಚ್ಚುವ ಮುನ್ನ ಅರ್ಚಕರು ದೀಪ ಹಚ್ಚಿ, ದೇವಿಯ ಮುಂದೆ ಹೂವು, ನೈವೇದ್ಯ ಇಡಲಿದ್ದಾರೆ. ಅನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.
