ಹಾಸನ: ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು (ಬುಧವಾರ ಅ. 22) ಕೊನೆಯ ದಿನವಾಗಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ. ಇನ್ನು ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ಅವರು ಇಂದು ಬೆಳ್ಳಂಬೆಳಗ್ಗೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಹೌದು, ಧ್ರುವ ಸರ್ಜಾ ಅವರು ಇಂದು ಅವರ ತಂದೆಯ ಜೊತೆ ಹಾಸನಾಂಬೆಯ ದರ್ಶನಕ್ಕೆ ತೆರಳಿದ್ದಾರೆ. ಸಾಮಾನ್ಯರಂತೆ ಸಾಮಾನ್ಯರಾಗಿ ಸರತಿ ಸಾಲಿನಲ್ಲಿ ನಿಂತು ಗೋಲ್ಡನ್ ಪಾಸ್ ಪಡೆದು ಹಾಸನವ ದರ್ಶನ ಪಡೆದಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ದೇವಿ ದರ್ಶನ ಆರಂಭವಾಗಿದ್ದು, ಸರತಿ ಸಾಲುಗಳಲ್ಲಿ ನಿಂತು ಸಹಸ್ರಾರು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಧರ್ಮ ದರ್ಶನ, 1000 ರೂ., 300 ರೂ. ಹಾಗೂ ವಿಶೇಷ ದರ್ಶನದ ಸರತಿ ಸಾಲುಗಳಲ್ಲಿ ಜನಜಂಗುಳಿ ಉಂಟಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಸಿಹಿ ಸುದ್ದಿ
ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ನಿರಂತರವಾಗಿ ದೇವಿಯ ದರ್ಶನ ಪಡೆದಿದ್ದಾರೆ. ಇಂದು ರಾತ್ರಿ 7ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗರ್ಭಗುಡಿಯ ಬಾಗಿಲು ಬಂದ್ ಆಗಿರಲಿದೆ. ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದೇವಿ ದರ್ಶನ ಇರುವುದಿಲ್ಲ. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನವಿರಲಿದೆ. ನಾಳೆ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.
