14 ಕೋಟಿ ಉದ್ಯೋಗ ನಷ್ಟ

14 ಕೋಟಿ ಉದ್ಯೋಗ ನಷ್ಟ

ಬೇಲೂರು, ಏ. 06: ಕೊರೊನಾ ರೋಗದಿಂದಾಗಿ ಜಾಗತಿಕ ಮಟ್ಟದಲ್ಲಿ 14 ಕೋಟಿ ಜನ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಪ್ರತಿನಿತ್ಯ ರಾಷ್ಟ್ರದಲ್ಲಿ 42 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದರೆ ರಾಜ್ಯದಲ್ಲಿ 3500 ಕೋಟಿ ರೂ.ನಷ್ಟ ಅನುಭವಿಸುತ್ತಿದ್ದೇವೆ. ಸಂಕಷ್ಟದ ಸ್ಥಿತಿಯಲ್ಲಿ ಒಗ್ಗಟ್ಟಿನಿಂದ ಹೆದರಿಸುವ ಕೆಲಸ ಆಗಬೇಕಿದೆ. ರೋಗ ಎಲ್ಲಾಧರ್ಮದವರನ್ನೂ ಕಾಡಿದೆ. ಜಾತಿ, ಧರ್ಮದಿಂದಲೆ ಯೋಚಿಸುವುದು ಸರಿಯಲ್ಲ. ಮೂಡನಂಬಿಕೆ ಪ್ರದರ್ಶನ ಸಲ್ಲದು ಎಂದರು.

ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರ ಮೇಲಿನ ಹಲ್ಲೆ ಖಂಡನೀಯ. ರೋಗ ಚಿಕಿತ್ಸೆ ನೀಡಲು ತೆರಳಿದ್ದವರ ಮೇಲೆ ಹಲ್ಲೆ ನಡೆಸುವುದೆಂದರೆ ಎಂತಹ ಸಂಸ್ಕೃತಿ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. 14ನೇ ತಾರೀಖಿನೊಳಗೆ ರೋಗ ನಿಯಂತ್ರಣಕ್ಕೆ ಬರಲಿ, ಲಾಕ್‌ಡೌನ್ ಅಂತ್ಯವಾಗಲಿ ಎಂಬುದೆ ನಮ್ಮೆಲ್ಲರ ಹಾರೈಕೆ ಎಂದ ಸಚಿವರು, ದೀಪ ಬೆಳಗಿಸುವ ಪ್ರಧಾನಿ ಆಶಯದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸುವ ಮೂಲಕ ರಾಜಕೀಯ ಹುಡುಕುವುದು ಸರಿಯಲ್ಲ, ಬಿಜೆಪಿ ಸಂಸ್ಥಾಪಕದಿನ ಏಪ್ರಿಲ್ 6 ರಂದು, ಈಗಾಗಲೆ ಬಿಜೆಪಿ ಸಾಕಷ್ಟು ಬೆಳೆದಿದ್ದು ಕೇಂದ್ರದಲ್ಲಿ 303 ರಾಜ್ಯದಲ್ಲಿ 28 ಸ್ಥಾನ ಪಡೆದಿರುವುದು ಕಣ್ಣೆದುರು ಇದ್ದರೂ ಟೀಕಿಸುವುದ ಬಿಡುವುದಿಲ್ಲ ಅದು ಅವರ ದೊಡ್ಡಬುದ್ದಿ ಎಂದು  ವ್ಯಂಗ್ಯವಾಡಿದರು.

ಪ್ರವಾಸೋಧ್ಯಮ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು, ಬೇಲೂರು ಮುಖ್ಯರಸ್ತೆ ಅಗಲೀಕರ, ಒಳಚರಂಡಿ ಉನ್ನತೀಕರಣದ ಬಗ್ಗೆ ಶಾಸಕ ಕೆ.ಎಸ್.ಲಿಂಗೇಶ್ ಮನವಿ ಮಾಡಿದ್ದು ಕೊರೊನಾ ಸಮಸ್ಯೆ ನಿವಾರಣೆ ನಂತರ ಅದಕ್ಕೊಂದು ಚಿತ್ರಣ ಸಿಗಲಿದೆ. ಚಿಕ್ಕಮಗಳೂರು, ಬೇಲೂರು ಮಾರ್ಗ ಸಕಲೇಶಪುರಕ್ಕೆ ಇದ್ದ ರೈಲುಮಾರ್ಗ ರದ್ಧಾಗಲಿದ್ದು ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರೈಲುಮಾರ್ಗ ಯೋಜನೆಗೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲೆ ಒಂದುಸುತ್ತಿನ ಸಭೆ ನಡೆಸಿ ಚರ್ಚಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ಈಗಾಗಲೆ ಹಾಸನದಿಂದ ಸಕಲೇಶಪುರಕ್ಕೆ ರೈಲು ಮಾರ್ಗವಿದೆ. ಹೊಸ ಮಾರ್ಗದ ಅನುಷ್ಠಾನಕ್ಕೆ ಹೆಚ್ಚು ವೆಚ್ಚ ಬರುವುದಿಲ್ಲ. ಹೊಸ ಮಾರ್ಗದಿಂದ ಹುಬ್ಬಳ್ಳಿ, ಬೆಂಗಳೂರು ಸಂಪರ್ಕಕ್ಕೆ ಅನುಕೂಲ ಆಗಲಿದೆ. ಅಲ್ಲದೆ ಚಿಕ್ಕಮಗಳೂರಿನಿಂದ ಹಾಸನಕ್ಕೆ ಬೇಲೂರು ಮಾರ್ಗ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿದೆ. ಬಿಳಿಕೆರೆ ತರೀಕೆರೆ ಮಾರ್ಗದ ಕಾಮಗಾರಿ ನಡೆಯುತ್ತಿದೆ ಎಂದ ಸಚಿವ ಸಿ.ಟಿ.ರವಿ  ಹೇಳಿದರು.

 

Related