ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ: ಡಿಸಿಎಂ

ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ: ಡಿಸಿಎಂ

ಬೆಂಗಳೂರು: ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಯಭಾರಿಗಳು ನೀವು.

ನಾನು ಹಾಗೂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿ ಅಲ್ಲಿ ನಾವು ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಘೋಷಣೆ ಮಾಡಿದೆವು. ಈ ಯೋಜನೆಯಿಂದ 1.50 ಕೋಟಿ ಮನೆಗಳಿಗೆ ಪ್ರಯೋಜನವಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಿದೆವು. ನಾವು ಅಕ್ಕಿ ಖರೀದಿ ಮಾಡಲು ಕೇಂದ್ರಕ್ಕೆ ಮನವಿ ಮಾಡಿದರೆ, ಕೇಂದ್ರ ಸರ್ಕಾರ ನಿರಾಕರಿಸಿತು. ಹೀಗಾಗಿ ನಮ್ಮ ಸರ್ಕಾರ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ.

ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ 70ರಿಂದ 110ಕ್ಕೆ ಏರಿತು. ಅಡುಗೆ ಅನಿಲ 410ರಿಂದ 1100 ರೂಪಾಯಿ ಆಯಿತು. ಅಡುಗೆ ಎಣ್ಣೆ 200ರ ಗಡಿ ದಾಟಿತು. ಹೀಗಾಗಿ ನಾವು ಬೆಲೆ ಏರಿಕೆ ಸಮಯದಲ್ಲಿ ಮಹಿಳೆಯರಿಗೆ ನೆರವಾಗಬೇಕು ಎಂದು ಚರ್ಚೆ ಮಾಡಿ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು. ಇಂದು 1.33 ಕೋಟಿ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ.

ಈ ಯೋಜನೆ ಘೋಷಣೆ ವೇಳೆ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ನಮ್ಮ ಗ್ಯಾರಂಟಿ ಚೆಕ್ ಗೆ ನಾನು ಹಾಗೂ ಸಿದ್ದರಾಮಯ್ಯ ಅವರು ಸಹಿ ಹಾಕಿದೆವು. ನಮ್ಮ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಮಂಗಳೂರಿನಲ್ಲಿ ರಾಹುಲ್ ಗಾಂಧಿ ಅವರು ಶಕ್ತಿ ಯೋಜನೆ ಘೋಷಣೆ ಮಾಡಿದರು. ಆಮೂಲಕ ರಾಜ್ಯದ ಎಲ್ಲೆಡೆ ಮಹಿಳೆಯರಿಗೆ ಸರ್ಕಾರಿ ಬಸ್ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಯಿತು.

ನಂತರ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಯುವನಿಧಿ ಯೋಜನೆ ಘೋಷಣೆ ಮಾಡಿ ಶಿವಮೊಗ್ಗದಲ್ಲಿ ಜಾರಿ ಮಾಡಿದೆವು. ಈ ಕಾರ್ಯಕ್ರಮಕ್ಕೆ 1 ಲಕ್ಷ ಯುವಕರು ಭಾಗವಹಿಸಿದ್ದರು. ಅಲ್ಲಿನ ಜನರನ್ನು ನೋಡಿದರೆ ಯಡಿಯೂರಪ್ಪನವರ ಮಗ ಗೆಲ್ಲುವುದು ಅಸಾಧ್ಯ ಎಂಬುದು ಖಚಿತವಾಗುತ್ತದೆ.

ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಬಡ ಕುಟುಂಬಗಳಿಗೆ ಮಾಸಿಕ 5-6 ಸಾವಿರ ಉಳಿತಾಯವಾಗುತ್ತದೆ. ಆಮೂಲಕ ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡಲಾಗಿದೆ. ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ.

ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್ ಪಕ್ಷ ನಿಮ್ಮನ್ನು ನಂಬಿದೆ. ನೀವು ಈ ನಂಬಿಕೆ ಉಳಿಸಿಕೊಳ್ಳಬೇಕು. ನಾವು ದೊಡ್ಡ ಹುದ್ದೆ ಕೊಟ್ಟಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಸಾಧ್ಯವಾದಷ್ಟು ಗೌರವ ಹಾಗೂ ಅಧಿಕಾರ ನೀಡುತ್ತಿದ್ದೇವೆ ಎಂದರು.

Related