“ಗಡಿಲಿಂಗದಳ್ಳಿ ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ”

“ಗಡಿಲಿಂಗದಳ್ಳಿ ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ”

ಚಿಂಚೋಳಿ: ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ ದೊರೆತಿದೆ. ಸೋಮವಾರ ಗ್ರಾಮಕ್ಕೆ ಆಗಮಿಸಿದ ನೂತನ ಬಸ್‌ಗೆ ಗ್ರಾಮಸ್ಥರು ತಳಿರು ತೋರಣ ಕಟ್ಟಿ ಸಂತೋಷ ವ್ಯಕ್ತಪಡಿಸಿ, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಕಳೆದ ಮೂರು ದಿನಗಳ ಹಿಂದೆ ಗಡಿಲಿಂಗದಳ್ಳಿ ಗ್ರಾ.ಪಂ. ಅಧ್ಯಕ್ಷ ಗೌರಿಶಂಕರ ಉಪ್ಪಿನ, ಐನಾಪೂರದ ಮಾಜಿ ತಾ.ಪಂ.ಸದಸ್ಯ ಪ್ರೇಮಸಿಂಗ್ ಜಾಧವ, ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಡಾ. ಅವಿನಾಶ ಜಾಧವ ಹಳ್ಳಿಗೆ ಬಸ್ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.
ಮಾಜಿ ತಾ.ಪಂ.ಸದಸ್ಯ ಪ್ರೇಮಸಿಂಗ್ ಜಾಧವ ಮಾತನಾಡಿ, ನಾಗರಾಳ ಡ್ಯಾಂ ನಿರ್ಮಾಣದಿಂದ ಗಡಿಲಿಂಗದಳ್ಳಿ ಗ್ರಾಮದ ಹಲವು ಪ್ರದೇಶ ಮುಳುಗಡೆಯಾದ ಪರಿಣಾಮ 15 ವರ್ಷಗಳಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರ ಮನವಿಗೆ ಈಗ ಪ್ರತಿಫಲ ಸಿಕ್ಕಂತಾಗಿದೆ ಎಂದರು. ಸಂಸದ ಮತ್ತು ಶಾಸಕರ ಮುರ್ತುವರ್ಜಿಯಿಂದ ಸೇತುವೆ, ರಸ್ತೆ ನಿರ್ಮಾಣವಾಗಿದೆ. ಇದೀಗ ಬಸ್ ಸೌಲಭ್ಯ ಕೂಡ ದೊರಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರ ಸದಸ್ಯರು ಹಾಗೂ ಗ್ರಾಮದ ಹಿರಿಯ ಕಿರಿಯ ಮುಖಂಡರು ಸೇರಿದಂತೆ ಇತರರಿದ್ದರು.

Related