ಜಿಲ್ಲಾಡಳಿತ ಬೆಡ್ ಪಡೆಯುತ್ತಿಲ್ಲ

ಜಿಲ್ಲಾಡಳಿತ ಬೆಡ್ ಪಡೆಯುತ್ತಿಲ್ಲ

ಕಲಬುರಗಿ : ಜಿಲ್ಲೆಯ ಬಿಜೆಪಿ ಶಾಸಕರ ಸೂಚನೆ ಮೇರೆಗೆ ಜಿಲ್ಲಾಡಳಿತ ಬೆಡ್‌ಗಳನ್ನು ಪಡೆಯುತ್ತಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಜಿಲ್ಲಾಧಿಕಾರಿ ಹಾಗೂ ಬಿಜೆಪಿ ಮುಖಂಡರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಜಿಲ್ಲೆಯ ಸೋಂಕಿತರ ಆರೈಕೆಗಾಗಿ ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ 450 ಬೆಡ್‌ಗಳನ್ನು ಜಿಲ್ಲಾಡಳಿತ ಪಡೆದಿಲ್ಲ ಎಂಬುದು ಬಿಜೆಪಿ-ಕಾಂಗ್ರೆಸ್ ಮುಖಂಡರ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಶರತ್ ಬಿ., ‘ಖರ್ಗೆ ಅವರು ನೀಡಿದ ಬೆಡ್‌ಗಳನ್ನು ನಾವು ಸ್ವೀಕರಿಸಿದ್ದೇವೆ. ಅಷ್ಟೂ ಬೆಡ್‌ಗಳನ್ನು ಒಂದೇ ಕಡೆ ಅಳವಡಿಸುವಷ್ಟು ದೊಡ್ಡ ಕೋವಿಡ್ ಆರೈಕೆ ಕೇಂದ್ರಗಳಿಲ್ಲ. ಹಾಗಾಗಿ, ಅಗತ್ಯವೆನಿಸಿದಾಗ ಅವುಗಳನ್ನು ಬಳಸಿಕೊಳ್ಳುತ್ತೇವೆ. ಚಿತ್ತಾಪುರ, ಜೇವರ್ಗಿ, ಅಫಜಲಪುರದ ಹಾಗೂ ಕಲಬುರ್ಗಿ ನಗರದ ಕೋವಿಡ್ ಕೇರ್ ಕೇಂದ್ರಗಳಲ್ಲಿ ಬಳಸಿಕೊಳ್ಳಲಾಗುವುದು’ ಎಂದರು.

ತಮ್ಮ ತಂದೆಯವರು ನೀಡಿದ ಬೆಡ್‌ಗಳು ಬಳಕೆಯಾಗದಿರುವ ಕುರಿತು ಟ್ವಿಟ್ಟರ್‌ನಲ್ಲಿ ನಿರಂತರ ಟೀಕಾ ಪ್ರಹಾರ ನಡೆಸಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರು, ‘ಕಾಂಗ್ರೆಸ್ ನೀಡಿದ್ದನ್ನು ಏಕೆ ಸ್ವೀಕರಿಸಬೇಕು ಎಂಬ ಸಂಕುಚಿತ ಮನೋಭಾವದಿಂದ ಬಿಜೆಪಿಯವರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದಾರೆ.

ಅಗತ್ಯಬಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊಗಳನ್ನು ಬೆಡ್ ಮೇಲೆ ಹಾಕಿಸಲು ಸಿದ್ಧರಿದ್ದೇವೆ. ಆಗಲಾದರೂ ತೆಗೆದುಕೊಳ್ಳಬಹುದೇನೋ’ ಎಂದು ವ್ಯಂಗ್ಯವಾಡಿದ್ದಾರೆ.

Related