ಹನುಮನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಹನುಮನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ದೇವನಹಳ್ಳಿ: ರಾಮ ಭಕ್ತ ಹನುಮನ ನೋಡಲು ಭಕ್ತಾದಿಗಳು ಸಾಗರದಂತೆ ಹರಿದುಬಂದರು. ಬೆಳಗ್ಗೆ ಮಹಾಮಂಗಳಾರತಿ ಸಮಯಕ್ಕೆ ಶ್ರೀ ವಿಜಯ ವೀರಾಂಜನೇಯ ಸ್ವಾಮಿಯ ದರ್ಶನ ಮಾಡಲು ಆರಂಭವಾದ ಭಕ್ತಾದಿಗಳು ರಾತ್ರಿ 9 ಗಂಟೆಯಾದರೂ ಕ್ಷಣವೂ ಬಿಡುವಿಲ್ಲದಂತೆ ಬರುತ್ತಲೇ ಇದ್ದರು.
ಕೊರೋನಾ ಅಥವಾ ಗ್ರಾಮ ಪಂಚಾಯತಿ ಚುನಾವಣೆ ಭಕ್ತಾದಿಗಳ ಸಂಖ್ಯೆ ಇಳಿಮುಖವಾಗಬಹುದು ಎಂಬ ನಂಬಿಕೆ ಸುಳ್ಳಾಯ್ತು ಎಂದು ಶ್ರೀ ವಿಜಯ ವೀರಾಂಜನೇಯ ಸ್ವಾಮಿ ಸೇವಾ ಸಮಿತಿಯ ಪ್ರಕಾಶ್ ತಿಳಿಸಿದರು.
ಬೆಳಗಿನ ಜಾವ ಸುಪ್ರಭಾತ ಸೇವೆ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿದ್ದು, 15 ಸಾವಿರ ಭಕ್ತಾದಿಗಳು ಇಂದು ದೇವರ ದರ್ಶನ ಪಡೆದರು. ಪ್ರಸಾದಕ್ಕೆ ಸಿಹಿ ಸಜ್ಜಿಗೆ, 15 ಸಾವಿರ ಉದ್ದಿನ ವಡೆ, ಖಾರ ಪೊಂಗಲ್ ಮಾಡಿಸಿದ್ದು, ಪ್ರಸಾದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಭಕ್ತಾದಿಗಳು ಕಾಣಿಕೆ ರೂಪದಲ್ಲಿ ನೀಡಿದರು.
ಜನರು 18 ಅಡಿ ಅಜಾನಬಾಹು ಹನುಮನನ್ನು ನೋಡಿ ಸಂತೃಪ್ತರಾದರೆ, ಹನುಮನ ರೂಪದ ಮಂಗಗಳು ಪೂಜಾ ಸಮಯಕ್ಕೆ ಬಂದು ಹನುಮನ ನೈವೇದ್ಯಕ್ಕೆ ಇಟ್ಟ ಬಾಳೆಹಣ್ಣು ಸವಿದು ಹೋದವು. ಕಳೆದ ವರ್ಷಕ್ಕಿಂತ ಭಕ್ತಾದಿಗಳ ಸಂಖ್ಯೆ ಈ ವರ್ಷ ದುಪ್ಪಟ್ಟು ಆಗಿದ್ದು ಹನುಮ ಜಯಂತಿ ವಿಜೃಂಭಣೆಯಿಂದ ನೆರವೇರಿತು ಎಂದು ತಿಳಿಸಿದರು.

Related