ಅನಾಥ ಹುಡುಗಿಯರಿಗೆ ಕಂಕಣ ಭಾಗ್ಯ

ಅನಾಥ ಹುಡುಗಿಯರಿಗೆ ಕಂಕಣ ಭಾಗ್ಯ

ದಾವಣಗೆರೆ, ಫೆ. 28 :  ಜಿಲ್ಲೆಗೂ, ಅನಾಥ ಯುವತಿಯರ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ. ಪ್ರತಿ ವರ್ಷ ಇಲ್ಲಿನ ಅನಾಥ ಹುಡುಗಿಯರು ಹುಡುಗರ ಜತೆ ಸಪ್ತಪದಿ ತುಳಿಯುತ್ತಿದ್ದಾರೆ. ಮಹಿಳಾ ನಿಲಯ ಇಬ್ಬರು ಅನಾಥ ಯುವತಿಯರ ಮದುವೆಗೆ ಸಾಕ್ಷಿ. ನಿಲಯದಲ್ಲಿದ್ದ ಅನಿತಾರನ್ನು ಸಿದ್ದಾಪುರ ತಾಲೂಕು ಬಾಳೆಕೊಪ್ಪದ ವಿನಾಯಕ ಸುಬ್ಬುರಾಯ ಹೆಗಡೆ ಕೈಹಿಡಿದರೆ, ರೇಣುಕಾ ಗೊರಪ್ಪನವರ್ ಅವರನ್ನು ಶಿರಸಿ ತಾಲೂಕು ಶಿವಳ್ಳಿಯ ನಾಗೇಂದ್ರ ಜನಾರ್ದನ ಭಟ್ಟ ಬಾಳಸಂಗಾತಿಯಾಗಿ ಸ್ವೀಕರಿಸಿದರು. ಡಿಸಿ ಮಹಾಂತೇಶ ಬೀಳಗಿ ಕನ್ಯಾದಾನ ಮಾಡಿದರುಇದೇ ವೇಳೆ ಜಗಳೂರು ತಾಲೂಕು ಅಣಬೂರು ಗೊಲ್ಲರಹಟ್ಟಿಯಿಂದ ಹೊರಗಿದ್ದ ಮೂಗ ಮಹಿಳೆಯ ಮಗುವಿಗೆ ‘ಶ್ರೀಕೃಷ್ಣ’ ಎಂದು ನಾಮಕರಣವನ್ನೂ ಮಾಡಲಾಯಿತು. ದಾವಣಗೆರೆ ಮಹಿಳಾ ನಿಲಯ ಸೋಮವಾರ ಅಕ್ಷರಶಃ ಕಲ್ಯಾಣಮಂಟಪವಾಗಿ ಮಾರ್ಪಾಡಾಗಿತ್ತು. ಒಂದು ಮದುವೆ ಮನೆಯಲ್ಲಿರಬೇಕಾದ ಸಂಭ್ರಮ, ಸಡಗರ, ಗಡಿಬಿಡಿ, ಅತಿಥಿ ಸತ್ಕಾರ ಸೇರಿದಂತೆ ಎಲ್ಲವೂ ಅಲ್ಲಿದ್ದವು.

ತೆಂಗು, ಬಾಳೆ ತಂದು ಮದುವೆ ಚಪ್ಪರ ಹಾಕಲಾಗಿತ್ತು. ರಂಗವಲ್ಲಿ ಬಿಡಿಸಿ ಬಣ್ಣ ತುಂಬಲಾಗಿತ್ತು. ಮಾವಿನ ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಬಾಣಸಿಗರನ್ನು ಕರೆಯಿಸಿ ಲಾಡು, ಬಾದುಷ, ಪಾಯಸ, ಚಿತ್ರಾನ್ನ, ಅನ್ನ, ಸಾಂಬಾರು..ಹೀಗೆ ಭರ್ಜರಿ ಭೋಜನ ತಯಾರಿಸಲಾಗಿತ್ತು.

Related