ಮರಾಠಿ ಸಾಹಿತ್ಯ ಮಂಡಳಕ್ಕೆ ಹೊಸ ರೂಪ

ಮರಾಠಿ ಸಾಹಿತ್ಯ ಮಂಡಳಕ್ಕೆ ಹೊಸ ರೂಪ

ಕಲಬುರಗಿ : ಕೋವಿಡ್ – 19  ಮತ್ತು ಲಾಕ್‌ಡೌನ್ ಜಾರಿ ಆಗಿರದಿದ್ದರೆ, ನಗರದ ಎಸ್‌ವಿಪಿ ವೃತ್ತದಲ್ಲಿರುವ ಮರಾಠಿ ಸಾಹಿತ್ಯ ಮಂಡಳದ ನವೀಕೃತ ಕಟ್ಟಡ ಉದ್ಘಾಟನೆಗೊಳ್ಳಬೇಕಿತ್ತು.

75ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಮರಾಠಿ ಸಾಹಿತ್ಯ ಮಂಡಳವು ಬೃಹತ್ ಸಮಾರಂಭ ಆಯೋಜಿಸಲು ಸಕಲ ಸಿದ್ಧತೆ ನಡೆಸಿತ್ತು.

ಇದಕ್ಕೆ ಪೂರಕವಾಗಿ ಹಲವು ಸುತ್ತಿನ ಸಭೆ ಮತ್ತು ಸಿದ್ಧತಾ ಪ್ರಕ್ರಿಯೆಗಳು ನಡೆದಿದ್ದವು. ಆದರೆ, ಮಾರ್ಚ್ ತಿಂಗಳಲ್ಲಿ ಘೋಷಣೆಯಾದ ಲಾಕ್‌ಡೌನ್ ಎಲ್ಲಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು. ಮಂಡಳದ ಈಗಿರುವ ಕಟ್ಟಡ 1975ರಲ್ಲಿ ನಿರ್ಮಾಣಗೊಂಡಿದ್ದು, ಅಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿಯವರು ಉದ್ಘಾಟಿಸಿದ್ದರು.

ಕಟ್ಟಡವು ಹಳತಾಗಿರುವ ಮತ್ತು ಹೆಚ್ಚು ಸ್ಥಳಾವಕಾಶ ಬೇಕಿದ್ದ ಕಾರಣ ಕಟ್ಟಡದ ನವೀಕರಣ ಪ್ರಕ್ರಿಯೆಗೆ ಮಂಡಳದ ಪ್ರಮುಖರು ಮತ್ತು ಸದಸ್ಯರು ಈ ವರ್ಷ ಜನವರಿಯಲ್ಲಿ ಚಾಲನೆ ನೀಡಿದ್ದರು.

1945ರಲ್ಲೇ ಅಸ್ತಿತ್ವಕ್ಕೆ ಮರಾಠಿ ಸಾಹಿತ್ಯ ಮಂಡಳವು ಮೊದಲು ಸಾಹಿತ್ಯಿಕ ಚಟುವಟಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗಿತ್ತು. ಪುಟ್ಟ ಕೋಣೆಯಲ್ಲೇ ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದ್ದವು. ಕ್ರಮೇಣ ಮರಾಠಿ ಮತ್ತು ಕನ್ನಡ ಸಾಹಿತ್ಯಾಸಕ್ತರ ಸಂಖ್ಯೆಯೂ ಹೆಚ್ಚಾಗಿ ಚಟುವಟಿಕೆಗಳು ವೇಗ ಪಡೆಯಿತು.

ಸಾಹಿತ್ಯ ಮಂಡಳದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದಲು ಎಲ್ಲರಿಗೂ ಅವಕಾಶವಿದೆ. 10 ಸಾವಿರಕ್ಕೂ ಹೆಚ್ಚು ಮರಾಠಿ ಪುಸ್ತಕಗಳು ಲಭ್ಯ ಇವೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಪತ್ರಿಕೆಗಳನ್ನು ತರಿಸುತ್ತೇವೆ.

‘ಭಾವ ಅನುಬಂಧ’ ತ್ರೈಮಾಸಿಕ: ಮರಾಠಿ ಸಾಹಿತ್ಯ ಮಂಡಳದ ವತಿಯಿಂದ ‘ಭಾವ ಅನುಬಂಧ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಹೊರತರಲಾಗುತ್ತಿದೆ. ಮರಾಠಿ ಸಾಹಿತ್ಯದಲ್ಲಿನ ವಿಶೇಷಗಳು, ಯುವ ಬರಹಗಾರರ ಲೇಖನಗಳು ಮತ್ತು ಸಾಹಿತ್ಯ ಕಾರ್ಯಕ್ರಮದ ಸುದ್ದಿಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ.

Related