ಸಂವಿಧಾನ ಕುರಿತು ರಸಪ್ರಶ್ನೆಯಲ್ಲಿ ಎಂಡಿಆರ್‌ ಕಾಲೇಜಿಗೆ ಪ್ರಶಸ್ತಿ

ಸಂವಿಧಾನ ಕುರಿತು ರಸಪ್ರಶ್ನೆಯಲ್ಲಿ ಎಂಡಿಆರ್‌ ಕಾಲೇಜಿಗೆ ಪ್ರಶಸ್ತಿ

ಬೆಂಗಳೂರು,ನ.25: ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿನ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯ ಮನ್ನಾದಿನ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಾ ಬಿ ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ನೆರವಿನೊಂದಿಗೆ ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್ ಸಂಸ್ಥೆಯವರು ಭಾರತದ ಸಂವಿಧಾನಕ್ಕೆ ಸಂಬಂಧಿಸಿದಂತೆ ConQuest 2023 ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಭಾರತದ ಸಂವಿಧಾನದ ಕುರಿತಂತೆ ರಾಷ್ಟ್ರೀಯ ಮಟ್ಟದಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದ್ದ ಈ ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ ಭಾರತದ ವಿವಿಧ ತಾಂತ್ರಿಕ ಸಂಸ್ಥೆಗಳು ಭಾಗವಹಿಸಿದ್ದವು ಹಾಗೂ ವಿಶೇಷವಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮಕ್ಕಳೂ ಕೂಡಾ ಭಾಗವಹಿಸಿದ್ದರು.

ಸಂವಿಧಾನದ ರಚನೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರದ ಜೊತೆಗೆ, ಸಂವಿಧಾನ ರಚನೆಯ ಹಲವು ಸಂಗತಿಗಳನ್ನು ಒಳಗೊಂಡಿದ್ದ ಈ ರಸಪ್ರಶ್ನೆ ಕಾರ್ಯಕ್ರಮವು ನಮ್ಮ ಯುವ ಪೀಳಿಗೆಯಲ್ಲಿ ಸಂವಿಧಾನದ ಕುರಿತ ಅರಿವನ್ನು ಹೆಚ್ಚುವಂತೆ ಮಾಡುವ ಉದ್ದೇಶವನ್ನು ಹೊಂದಿತ್ತು.

ಎರಡು ಹಂತದಲ್ಲಿ ಜರುಗಿದ ಈ ವಿನೂತನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸೇರಿದ ಎಂಡಿಆರ್ ಪಿಯು ಕಾಲೇಜು, ಜಡಿಗೇನಹಳ್ಳಿ ಕಾಲೇಜಿನ ಮಕ್ಕಳಾದ ಕುಮಾರಿ ಮನೀಶ ಎಂ, ಪುನೀತ್ ಗೌಡ ಹಾಗೂ ಪ್ರಮೋದ್ ಯಾದವ್ ಅವರು ಮೊದಲ ಸ್ಥಾನ ಗಳಿಸಿದರೆ, ಎಂಡಿಆರ್ ಪಿಯು ಕಾಲೇಜು, ದೊಡ್ಡಬಡಗೆರೆ ಸಂಸ್ಥೆಯ ಮಕ್ಕಳಾದ ಮದನ್, ಚಂದನ ಹಾಗೂ ಸುಜಯ್ ಎಂ ಅವರು ದ್ವಿತೀಯ ಸ್ಥಾನವನ್ನು ಗಳಿಸಿದರು.

ಇನ್ನು ಎಂಡಿಆರ್ ಎಸ್ ಪಿಯು ಕಾಲೇಜು, ಅಡಕಮಾರನಹಳ್ಳಿ ಸಂಸ್ಥೆಯ ವಿದ್ಯಾರ್ಥಿಗಳಾದ ಹರ್ಷಲ, ತೇಜಸ್ ಹೆಚ್ ಎನ್ ಹಾಗೂ ಶ್ರೇಯಸ್ ಬಿ ಆರ್ ಅವರು ಮೂರನೇ ಸ್ಥಾನ ಪಡೆದರು. ಎರಡನೇ ಭಾಗದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಫೈನಲ್ಸ್ ನಲ್ಲಿ ಭಾಗವಹಿಸಿದ ತಂಡಗಳ ಪೈಕಿ ಗೋವಾ ವಿಶ್ವವಿದ್ಯಾಲಯವು ಮೊದಲ ಸ್ಥಾನ ಪಡೆದರೆ, ನ್ಯಾಷನಲ್ ಲಾ ಸ್ಕೂಲ್ ದೆಹಲಿ ಇವರು ಎರಡನೇ ಸ್ಥಾನ ಪಡೆದರು ಮತ್ತು 3 ನೇ ಸ್ಥನವು ಗುಜರಾತ್ ನ್ಯಾಷನಲ್ ಲಾ ಯೂನಿವರ್ಸಿಟಿ ಇವರ ಪಾಲಾಯಿತು.

ಒಂದು ಮಹತ್ತರ ಉದ್ದೇಶದೊಂದಿಗೆ ಜರುಗಿದ ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಒಶಾಲ ಸಂಸ್ಥೆಯವರು ಸಹಕಾರ ನೀಡಿದ್ದು ರಾಮಯ್ಯ ಕಾನೂನು ಕಾಲೇಜಿನಲ್ಲಿ ಅಂತಿಮ ಸುತ್ತಿನ ರಸಪ್ರಶ್ನೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಾ ಬಿ ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಡಾ.ಭಾಗ್ಯಲಕ್ಷ್ಮೀ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶೈಕ್ಷಣಿಕ ವಿಭಾಗದ ಉಪ ನಿರ್ದೇಶಕರಾದ ಪುಂಡಲೀಕ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು

Related