ಹಗರಣ ಬಯಲಾದರೇ ಮಠ ಬಿಡುತ್ತಾರಾ?

ಹಗರಣ ಬಯಲಾದರೇ ಮಠ ಬಿಡುತ್ತಾರಾ?

ಮೈಸೂರು : ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ಸಿಎಂ ಬಿಎಸ್‌ವೈ ಚಕ್ರವ್ಯೂಹದ ವಿರುದ್ಧ ಹೋರಾಡಿ ನಾನು ಅರ್ಜುನನಾಗಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ಮೈಸೂರು ಪ್ರವಾಸದಲ್ಲಿರುವ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬಿಎಸ್ ವೈ ವಿರುದ್ಧ ಹೋರಾಟವನ್ನು ಅವರು ಮಹಾಭಾರತದ ಚಕ್ರವ್ಯೂಹ ಯುದ್ಧಕ್ಕೆ ಹೋಲಿಸಿ, ಅಭಿಮನ್ಯುನೂ ಆಗಬಹುದು, ಅರ್ಜುನನೂ ಆಗಬಹುದು, ನಾನು ಅರ್ಜುನನಾಗಿ ಮುಖ್ಯಮಂತ್ರಿಗಳ ವಿರುದ್ಧ ಗೆಲ್ಲುತ್ತೇನೆ ಎಂದರು.

ಅಭಿಮನ್ಯುವಿನ ಇತಿಹಾಸವನ್ನು ಈಗಲೂ ಜನರು ನೆನಪು ಮಾಡಿಕೊಳ್ಳುತ್ತಾರೆ, ಅಭಿಮನ್ಯು ಒಬ್ಬ ಶ್ರೇಷ್ಠ ಯೋಧ, ನಾನು ಅರ್ಜುನನಾಗುತ್ತೇನೆ, ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಗೌರವಯುತವಾಗಿ ಅವರು ನಿವೃತ್ತಿ ತೆಗೆದುಕೊಳ್ಳಬೇಕು, ಅವರ ಆಡಳಿತವನ್ನು ಪುತ್ರ ವಿಜಯೇಂದ್ರ ನಡೆಸುತ್ತಿದ್ದಾನೆ.

ಮುಖ್ಯಮಂತ್ರಿಗಳಿಗೆ ನೂರಾರು ಫೈಲ್ ಗಳಿಗೆ ಸಹಿ ಮಾಡುವ ಶಕ್ತಿ ಕೂಡ ಇಲ್ಲ, ಇಂತಹ ಸಂದರ್ಭದಲ್ಲಿ ಅವರಿಗೆ ಅಧಿಕಾರವೇಕೆ, ಸ್ವಯಂ ನಿವೃತ್ತಿ ಪಡೆಯಬೇಕು ಎಂದು ಗುಡುಗಿದರು.

ನಿಮ್ಮದು ಅರಣ್ಯ ರೋಧನ ಎಂದು ಎನಿಸುವುದಿಲ್ಲವೇ ಎಂದು ಸುದ್ದಿಗಾರರು ಕೇಳಿದಾಗ, ಹೋರಾಟ, ಸಂಘರ್ಷಗಳಲ್ಲಿ ಅರಣ್ಯರೋಧನ ಇದ್ದೇ ಇರುತ್ತದೆ, ಆದರೆ ಒಂದಲ್ಲ ಒಂದು ದಿನ ಸತ್ಯ ಬೆಳಕಿಗೆ ಬಂದೇ ಬರುತ್ತದೆ. ಪಾಂಡವರಿಗೆ ವನವಾಸ ಹೋಗಿ ಬಂದ ಮೇಲೆ ಜಯ ಸಿಕ್ಕಿತು, ಹಾಗೆಯೇ ನಾವು ವನವಾಸ ಮುಗಿಸಿ ಅಜ್ಞಾತವಾಸದಲ್ಲಿದ್ದೇವೆ, ಅಜ್ಞಾತವಾಸವೂ ಮುಗಿಯುತ್ತಾ ಬಂದಿದೆ, ಹೋರಾಟ ನಡೆಯುತ್ತಿದೆ, ಪಟ್ಟಾಭಿಷೇಕ ಮಾಡುವ ಕಾಲ ಬಂದಿದೆ, ಒಂದಲ್ಲ ಒಂದು ದಿನ ಜಯ ಸಿಗುತ್ತದೆ ಎಂದರು.

ಒಬ್ಬೊಬ್ಬರಿಗೆ ಒಂದೊಂದು ಕಾಲವೆಂಬುದು ಇರುತ್ತದೆ, ಮುಖ್ಯಮಂತ್ರಿಗಳ ಬಳಿ ಈಗ ಹಣ ಇದೆ, ಹಾಗಾಗಿ ಮಠಾಧೀಶರುಗಳ ಕಡೆಯಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಲಿಂಗಾಯತರು ಹೋರಾಟ ಮಾಡುತ್ತೀವಿ ಎಂದು ಮಠಾಧೀಶರು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಹಗರಣಗಳು ಹೊರಗೆ ಬಂದರೆ ಈ ಮಠಾಧೀಶರುಗಳು ಯಾರೂ ಮಾತನಾಡುವುದಿಲ್ಲ, ನಂತರ ಮುಖ್ಯಮಂತ್ರಿಗಳು ಸಮಾಜದ ಮುಂದೆ ಮುಖ ತೋರಿಸದ ರೀತಿ ಆಗುತ್ತದೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಪರವಾಗಿ ಮಾತನಾಡುವ ಮಠಾಧೀಶರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು, ಮುಖ್ಯಮಂತ್ರಿಗಳ ಹಗರಣಗಳು ಒಂದೊಂದೇ ಹೊರಗೆ ಬಂದಾಗ ಈ ಮಠಾಧೀಶರುಗಳೆಲ್ಲ ಮಠ ಬಿಟ್ಟು ಓಡಿಹೋಗಬೇಕಾಗುತ್ತದೆ, ನಾವು ಈಗ ಸುಮ್ಮನೆ ಕುಳಿತಿದ್ದೇವೆ, ಕೊನೆಗೊಂದು ದಿನ ಬ್ರಹ್ಮಾಸ್ತç ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Related