ಸಚಿವ ಹೆಬ್ಬಾರ್ ಯತ್ನ: ಮಧ್ಯಪ್ರದೇಶದಲ್ಲಿ ಅತಂತ್ರರಾಗಿದ್ದ ವಿದ್ಯಾರ್ಥಿಗಳು ರಾಜ್ಯಕ್ಕೆ

ಸಚಿವ ಹೆಬ್ಬಾರ್ ಯತ್ನ: ಮಧ್ಯಪ್ರದೇಶದಲ್ಲಿ ಅತಂತ್ರರಾಗಿದ್ದ ವಿದ್ಯಾರ್ಥಿಗಳು ರಾಜ್ಯಕ್ಕೆ

ಕಾರವಾರ: ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ 19 ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ಮರಳಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಲಾಕ್ ಡೌನ್ ಆದೇಶದಿಂದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ನವೋದಯ ಶಾಲೆಯ 19 ಜನ ವಿದ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದರು.

ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಮತ್ತು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ವಿಶೇಷ ಕಾಳಜಿವಹಿಸಿ ರಾಜ್ಯ ಸರ್ಕಾರದೊಂದಿಗೆ ಹಾಗೂ ಮಧ್ಯಪ್ರದೇಶ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕಳುಹಿಸುವಂತೆ ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂಧಿಸಿದ ಮಧ್ಯಪ್ರದೇಶ ಸರ್ಕಾರವು ಎಲ್ಲಾ 19 ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕಳುಹಿಸುವುದಾಗಿ ತಿಳಿಸಿತು. ಅಲ್ಲದೇ ಗುರುವಾರ ಸಾಯಂಕಾಲ ಅವರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ತವರಿಗೆ ಕಳುಹಿಸುವ ವ್ಯವಸ್ಥೆ ಸಹ ಮಾಡಿತು. ಎಲ್ಲಾ ವಿದ್ಯಾರ್ಥಿಗಳು ಮಧ್ಯಪ್ರದೇಶದಿಂದ ವಿಶೇಷ ಬಸ್ ಮೂಲಕವಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಆಗಮಿಸಿದ ನಂತರ ಅವರನ್ನು ಮುಂಡಗೋಡ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿ ನಂತರ ಅವರನ್ನು ಮನೆಗೆ ಕಳುಹಿಸಲಾಗುವುದು. ಮಧ್ಯಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಅವರ ಮನೆಗೆ ಕಳುಹಿಸುವುದಕ್ಕೆ ಸಚಿವ ಹೆಬ್ಬಾರ್ ವಿಶೇಷ ಬಸ್ ಅನ್ನು ಮುಂಗಡವಾಗಿ ಬುಕ್ ಮಾಡಿಸಿದ್ದಾರೆ.
ವಿದ್ಯಾರ್ಥಿಗಳು ವಿಶೇಷ ಬಸ್ ಮೂಲಕ ಸುರಕ್ಷಿತವಾಗಿ ಜಿಲ್ಲೆಗೆ ಆಗಮಿಸಲು ಪ್ರಯತ್ನಿಸಿದ ಎರಡೂ ರಾಜ್ಯ ಸರ್ಕಾರದ ಕ್ರಮಕ್ಕೆ ಪಾಲಕರು ಹಾಗೂ ಶಾಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Related