ಆರ್ಥಿಕ ಸ್ವಾವಲಂಬನೆಯ ಜೀವನಹೊಂದಿ ಶಸಕ್ತರಾಗಿ: ಸಚಿವ ಬಿ.ನಾಗೇಂದ್ರ

ಆರ್ಥಿಕ ಸ್ವಾವಲಂಬನೆಯ ಜೀವನಹೊಂದಿ ಶಸಕ್ತರಾಗಿ: ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಸೆ.24: ವಿಶೇಷಚೇತನರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿ ಜೀವನ ಹೊಂದುವ ಮೂಲಕ ಶಸಕ್ತರಾಗಬೇಕು, ವಿಶೇಷಚೇತನರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಆರ್ಟಿಫಿಶಿಯಲ್ ಲಿಂಬ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಇವರ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಜಿಲ್ಲಾ ವಕ್ಫ್ ಸಮಿತಿಯ ಶಾದಿ ಮಹಲ್‍ನಲ್ಲಿ ಇಂದು ಏರ್ಪಡಿಸಲಾದ ಕೇಂದ್ರ ಸರ್ಕಾರದ ವಿಶೇಷ ಆಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸರ್ಕಾರವು ವಿಶೇಷಚೇತನರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅವುಗಳನ್ನು ಸದುಪಯೋಗಪಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಯಿಂದ ವಿಶೇಷಚೇತನ ಕ್ರೀಡಾಪಟುಗಳಿಗೆ ವೀಲ್‍ಚೇರ್ ಸೈಕಲ್‍ಗಳನ್ನು ವಿತರಿಸಲಾಗಿದೆ. ವಿಶೇಷಚೇತನರನ್ನು ಮುಖ್ಯ ವಾಹಿನಿಗೆ ತರಲು ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಬೇಕು. ಏನೇ ಸೌಲಭ್ಯಗಳು ಬೇಕಾದಲ್ಲಿ ಆಯಾ ಶಾಸಕರ ಗಮನಕ್ಕೆ ತರಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ವಾಹನಗಳನ್ನು ವಿತರಿಸಲು ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಲ್ಲಿ ಖರೀದಿಸಲು ಚಿಂತಿಸಲಾಗುವುದು ಎಂದರು.
ಸಂಸದರಾದ ವೈ.ದೇವೇಂದ್ರಪ್ಪ ಅವರು ಮಾತನಾಡಿ, ಅಡಿಪ್ ಯೋಜನೆಯಡಿ ಅಗತ್ಯವಿರುವ ಅಂಗವಿಕಲರಿಗೆ ಅತ್ಯಾಧುನಿಕ ಮತ್ತು ವೈಜ್ಞಾನಿಕವಾಗಿ ತಯಾರಿಸಿದ, ಆಧುನಿಕ ಸಾಧನಗಳು ಮತ್ತು ಉಪಕರಣಗಳನ್ನು ವಿತರಿಸಲಾಗುತ್ತಿದ್ದು, ಅವರ ಅಂಗವೈಕಲ್ಯಗಳ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಅವರ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪುನರ್ವಸತಿಯನ್ನು ಉತ್ತೇಜಿಸಲು ಹಾಗೂ ಅವರ ಆರ್ಥಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 540 ವಿಶೇಷಚೇತನ ಫಲಾನುಭವಿಗಳಿಗೆ 777 ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ,ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಬಿ.ಜಾನಕಿ ಸೇರಿದಂತೆ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು, ಸಿಬ್ಬಂದಿ, ವಿಶೇಷಚೇತನ ಫಲಾನುಭವಿಗಳು ಉಪಸ್ಥಿತರಿದ್ದರು.

Related