ಯಾರಿಗೂ ಒಂದು ರೂಪಾಯಿ ಲಂಚ ನೀಡಬೇಡಿ: ಡಿಸಿಎಂ

ಯಾರಿಗೂ ಒಂದು ರೂಪಾಯಿ ಲಂಚ ನೀಡಬೇಡಿ: ಡಿಸಿಎಂ

ಕನಕಪುರ: ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆಗೂ ಮುಂಚಿತವಾಗಿ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ ಅವರು, ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಬಹುದು. ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲ್ಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು. ಈ ಹಿಂದಿನ ತಹಶೀಲ್ದಾರ್ ಇದ್ದಾಗ ಒಂದಷ್ಟು ತೊಂದರೆಗಳು ಇದ್ದವು.

ಕನಕಪುರ- ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ಕಾರ್ಯವನ್ನು ಉಯ್ಯಂಬಳ್ಳಿಯಿಂದ ಪ್ರಾರಂಭ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ- ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್ನಲ್ಲಿ ದೊರೆಯುತ್ತದೆ.

ಈಗಾಗಲೇ ಭೂಮಿ ಯೋಜನೆಯ ಅಡಿ ಪಹಣಿ- ಪೋಡಿ ದಾಖಲೆಗಳು ಸಿಗುತ್ತಿವೆ. ದಿಶಾ ವೆಬ್ಸೈಟಿನಲ್ಲಿ ನಿಮ್ಮ ಜಮೀನಿನ ವಾಸ್ತವ ಸ್ಥಿತಿ ತಿಳಿಯುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೇ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ನನ್ನ ಕ್ಷೇತ್ರದಲ್ಲೂ ಜನರಿಗೆ ಈ ಸೌಲಭ್ಯ ದೊರೆಯಲಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು, ತೊಂದರೆಗಳನ್ನು ಶೀಘ್ರ ಬಗೆಹರಿಸಿಬೇಕು ಎಂದು ಸೂಚನೆ ನೀಡಿದ್ದೇನೆ.

ಜನಸ್ಪಂದನ ಸಭೆಯಲ್ಲಿ ಅರ್ಜಿಗಳನ್ನು ನೀಡಿ ಸ್ವೀಕೃತಿ ದಾಖಲೆಗಳನ್ನು ಜನರು ಪಡೆಯಬೇಕು. ಇಲ್ಲಿ ಸಲ್ಲಿಸಿದ ಅಹವಾಲುಗಳನ್ನು ಪರಿಶೀಲನೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗುವುದು. ನಾನು ಸಹ ಕಾಲ, ಕಾಲಕ್ಕೆ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.

 

Related