ಮುಸ್ಲಿಂ ಆದ ಅನು

ಮುಸ್ಲಿಂ ಆದ ಅನು

ಬೆಂಗಳೂರು, ಮಾ. 05: ಹಲವು ದಿನಗಳಿಂದ ನಟನೆಯಿಂದ ದೂರವಾಗಿದ್ದ ನಟಿ ಅನುಪ್ರಭಾಕರ್ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಹೌದು, ನಟಿ ಅನುಪ್ರಭಾಕರ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟು ಕಾದಂಬರಿ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾದಂಬರಿ ಆಧರಿತ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಿವೆ ಎನ್ನುತ್ತಿರುವಾಗಲೇ ಕಾದಂಬರಿಗಾರ್ತಿ ಸಾರಾ ಅಬೂಬಕರ್ ಅವರ ‘ವಜ್ರಗಳು’ ಕಾದಂಬರಿ, ಸಿನಿಮಾ ರೂಪ ಪಡೆದುಕೊಂಡಿದೆ. ‘ಸಾರಾ ವಜ್ರ’ ಶೀರ್ಷಿಕೆಯಲ್ಲಿ ಚಿತ್ರ ಸಿದ್ಧವಾಗಿದ್ದು, ಚಿತ್ರದ ಫಸ್ಟ್ ಲುಕ್ ಸಹ ಹೊರಬಿದ್ದಿದೆ. ಮುಸ್ಲಿಂ ಕುಟುಂಬದ ಹೆಣ್ಣುಮಗಳ ಪಾತ್ರದಲ್ಲಿ ಅನು ಪ್ರಭಾಕರ್ ಪ್ರತ್ಯಕ್ಷವಾಗಿ, ಪೇಂಟಿಂಗ್ ರೀತಿಯಲ್ಲಿ ಅವರ ಮೊದಲ ಲುಕ್ ಮೂಡಿಬಂದಿದೆ.

ಕಳೆದ ವರ್ಷ ಬಿಡುಗಡೆಯಾದ ‘ಅನುಕ್ತ’ ಚಿತ್ರದಲ್ಲಿ ಸಣ್ಣ ಪಾತ್ರ ನಿಭಾಯಿಸಿದ್ದ ಅವರು, ಈಗ ‘ಸಾರಾ ವಜ್ರ’ ಮೂಲಕ ಪೂರ್ಣ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ‘ಕಳೆದ ವರ್ಷ ‘ಅನುಕ್ತ’ದಲ್ಲಿ ನಟಿಸಿದ್ದೆ. ಆದರೆ, ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಹಲವು ದಿನಗಳಾದವು. ಆ ಅವಕಾಶ ಈಗ ‘ಸಾರಾ ವಜ್ರ’ ಚಿತ್ರದಲ್ಲಿ ಸಿಕ್ಕಿದೆ. ಕಾದಂಬರಿ ಆಧರಿತ ಸಿನಿಮಾ ಎಂದರೆ, ಪೂರ್ಣ ಕಲಾತ್ಮಕವಾಗಿ ನಿರ್ವಣವಾಗಲಿದೆಯೇ ಎಂಬ ಅಳುಕಿತ್ತು. ಆದರೆ, ಎಲ್ಲ ಶೈಲಿಗೂ ಹೊಂದಿಕೆ ಆಗುವ ರೀತಿಯಲ್ಲಿ ಚಿತ್ರ ಸಿದ್ಧವಾಗಿದೆ’ ಎನ್ನುವ ಅನು ಪ್ರಭಾಕರ್, ಈ ಚಿತ್ರದಲ್ಲಿ ನಫೀಸಾ ಎಂಬ ಪಾತ್ರ ನಿಭಾಯಿಸಿದ್ದಾರೆ.

‘ಕಾದಂಬರಿಯ ಕಥಾನಾಯಕಿ ಹೆಸರೇ ನಫೀಸಾ. ಆಕೆಯ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ಜತೆಗೆ ಇನ್ನು ಕೆಲ ಪ್ರಧಾನ ಮುಖಗಳೂ ಕಾಣಿಸಿಕೊಳ್ಳಲಿವೆ. ಮುಸ್ಲಿಂ ಮನೆತನದ ಹುಡುಗಿ ತನ್ನ ವೃದ್ಧಾಪ್ಯದ ವರೆಗಿನ ಕಾಲಘಟ್ಟದಲ್ಲಿ ಘಟಿಸುವ ಬದಲಾವಣೆಗಳನ್ನು ಈ ಸಿನಿಮಾದಲ್ಲಿ ತುಂಬಲಾಗಿದೆ. ಕಥೆ ಒಂದೇ ಸಮುದಾಯಕ್ಕೆ ಸಂಬಂಧಪಟ್ಟಿದೆಯಾದರೂ, ಎಲ್ಲರಿಗೂ ಕನೆಕ್ಟ್ ಆಗುತ್ತದೆ’ ಎಂದು ಪಾತ್ರದ ಬಗ್ಗೆ ವಿವರಿಸುತ್ತಾರೆ. ಈ ಚಿತ್ರವನ್ನು ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶನ ಮಾಡಿದ್ದು, ಸಂಭ್ರಮ್ ಡ್ರೀಮ್ ಹೌಸ್ ನಿರ್ವಣದ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿಕೊಂಡ ಚಿತ್ರತಂಡ ಬಿಡುಗಡೆಯ ಹೊಸ್ತಿಲಲ್ಲಿದೆ. ನಟ-ನಿರೂಪಕ ರೆಹಮಾನ್, ಬದ್ರುದ್ದೀನ್ ಪಾತ್ರದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡರೆ, ರಮೇಶ್ ಭಟ್, ಸುಧಾ ಬೆಳವಾಡಿ, ಸುಹಾನಾ ಸೈಯದ್ ಇನ್ನುಳಿದ ಪಾತ್ರವರ್ಗದಲ್ಲಿದ್ದಾರೆ.

 

Related