ತಾಲೂಕಿನಲ್ಲಿ ವಿಶಿಷ್ಟ ಸಂಪ್ರದಾಯ

ತಾಲೂಕಿನಲ್ಲಿ ವಿಶಿಷ್ಟ ಸಂಪ್ರದಾಯ

ಬೀದರ್ : ತಲೆಮೇಲೆ ಮರಗಮ್ಮನ ಮೂರ್ತಿಯನ್ನು ಹೊತ್ತು ಡೋಲಿನಾಕಾರದ ವಾದ್ಯವನ್ನು ಭಾರಿಸುವ ಹೆಣ್ಣುಮಗಳು ‘ಮರಗಮ್ಮ ಬಂದಾಳ್ರೆಯವ್ವಾ, ದಾನ ಮಾಡ್ರಿ’ ಎಂಬ ಧ್ವನಿಯೊಂದಿಗೆ ಮನೆ ಮನೆಗೆ ಸಾಗುತ್ತಾರೆ. ಜೊತೆಗೆ ಕೈಯಲ್ಲಿ ಬಾರಕೋಲು ಹಿಡಿದು ಅಬ್ಬರಿಸುವ ಪೋತರಾಜ ತನ್ನದೇ ಅವತಾರದಲ್ಲಿ ಚಾಟಿ ಬೀಸುತ್ತ ಎದುರಾದವರಲ್ಲಿ ಬೇಡುತ್ತ, ಕೆಲವೊಮ್ಮೆ ಆ ಬಾರಕೋಲಿನಿಂದ ತನ್ನ ಶರೀರವನ್ನು ದಂಡಿಸಿಕೊಂಡು ಭಿಕ್ಷೆ ಅರಸುವ ಅಲೆಮಾರಿ ಜನಾಂಗದವರೇ ದುರುಗ ಮುರುಗಿಯರು.

ಕೆಲ ಕಡೆ ಇವರನ್ನು ಬುರ ಬುರ ಪೋಚಮ್ಮನವರೆಂದೂ, ಮರಗಮ್ಮದವರೆಂದೂ ಸಹ ಕರೆಯುತ್ತಾರೆ. ವಿಶಿಷ್ಟ ಜನಪದ ಕಲೆ, ಮರಗಮ್ಮನ ರೂಪದ ಈ ದೇವತೆ ಒಂದು ಕಡೆ ನೆಲೆ ನಿಲ್ಲುವವಳಲ್ಲ, ಊರೂರು ಸುತ್ತುವವಳು. ತಮ್ಮ ದೇವತೆಯನ್ನು ಪೆಟ್ಟಿಗೆಯಲ್ಲಿಟ್ಟು, ಅದನ್ನು ಹೊತ್ತ ಸ್ತ್ರೀ ‘ಉರುಮೆ’ ಅಥವಾ ‘ಅರೆ’ ವಾದ್ಯದ ಬಾರಿಸುತ್ತಿರುತ್ತಾಳೆ.

ಜನರು ಈ ದುರಗ ಮುರಗಿಯರು ಮನೆಮುಂದೆ ಬಂದಾಗ ಭಕ್ತಿಯಿಂದ ಮೊರದಲ್ಲಿ ದವಸ ಧಾನ್ಯಗಳು, ಜೋಳ, ಕಾಳುಗಳನ್ನು ದೇವತೆಗೆ ಅರ್ಪಿಸುತ್ತಾರೆ. ಭಂಡಾರವನ್ನು ನಂತರ ಮನೆ ಮಕ್ಕಳಿಗೆಲ್ಲಾ ಹಚ್ಚುವ ಪರಂಪರೆಯಿದೆ.

ದುರ್ಗಮರಗಿಯರು ಬಾರಿಸುವ ವಾದ್ಯವು ಇನ್ನೊಂದು ಕಡೆಯಿರುತ್ತದೆ. ವಾದ್ಯವನ್ನು ಒಂದು ಕಡೆಯಿಂದ ‘ದರ್ರಬುರ್ರ’ ಎಂಬ ಶಬ್ದ ಬಂದರೆ ಬಡಿಯುವ ಕಡೆಯಿಂದ ‘ಢಮ ಢಮ್ಮಿ ಢಮದಮ್ಮಿ’ ಎಂಬ ಶಬ್ದ ಬರುತ್ತದೆ. ಈ ಶಬ್ದ ಜನರ ಕಿವಿಗೆ ಬಂದ ತಕ್ಷಣ ಮರಗಮ್ಮ ಬಂದಳೆAದು ಜನರು ಭಾವಿಸುತ್ತಾರೆ.

ಒಂದೆಡೆ ನೆಲೆ ನಿಲ್ಲದೆ ಅಲೆಮಾರಿಗಳಾಗಿ ವಿಶಿಷ್ಟ ಸಂದರ್ಭಗಳಲ್ಲಿ ದೇವಿಯ ಪ್ರತಿರೂಪವನ್ನು ಹೊತ್ತು ಬರುತ್ತಿದ್ದರು. ಈಗ ಅಲೆಮಾರಿಗಳಾಗಿರುವ ಇವರು ಅಲ್ಲಲ್ಲಿ ಕಾಯಂ ವಾಸಿಗಳಾಗಿ ಮಾರ್ಪಟ್ಟಿರುವುದರಿಂದ ದೇವಿಯನ್ನು ಹೊತ್ತು ತಿರುಗುವ ಹಾಗೂ ಪೋತರಾಜರು ಬರುವುದು ವಿರಳವಾಗಿದೆ. ಹಬ್ಬ, ಜಾತ್ರೆ, ದೀಪಾವಳಿಯಂತಹ ವಿಶಿಷ್ಟ ದಿನಗಳು, ಅಂಗಡಿ ಮುಂಗಟ್ಟುಗಳ ಪೂಜೆಯ ಸಂದರ್ಭದಲ್ಲಿ ಮಾತ್ರ ಕಾಣಿಸುತ್ತಿದ್ದಾರೆ.

Related