ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ರದ್ದತಿಗೆ ಸೂಚಿಸಿದ ಕೆ. ಗೋಪಾಲಯ್ಯ

ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ರದ್ದತಿಗೆ ಸೂಚಿಸಿದ ಕೆ. ಗೋಪಾಲಯ್ಯ

ಧಾರವಾಡ: ಕೊರೋನಾ ಸಂಕಷ್ಟದಲ್ಲಿ ಯಾರಿಗೂ ಪಡಿತರ ನಿರಾಕರಿಸಬಾರದು. ಕಾರ್ಡ್ ಇಲ್ಲದವರಿಗೆ ಸೌಲಭ್ಯ ಒದಗಿಸಬೇಕು. ಇಂಥ ಸಂದಿಗ್ಧತೆಯಲ್ಲಿ ಯಾವುದೇ ಕಾರ್ಡ್ ಅನರ್ಹಗೊಳಿಸಬಾರದು. ತೂಕ, ಅಳತೆಯಲ್ಲಿ ಮೋಸ, ಪಡಿತರದಾರರಿಂದ ಸೇವಾ ವೆಚ್ಚದ ಹಣ ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸುವಂತೆ ಆಹಾರ-ನಾಗರಿಕ ಇಲಾಖೆ ಸಚಿವ ಕೆ. ಗೋಪಾಲಯ್ಯ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೋನಾ ಹಿನ್ನಲೆ ಪಡಿತರ ದಾಸ್ತಾನು, ವಿತರಣೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ವಿತರಣೆ ಕುರಿತಂತೆ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು, ಗ್ರಾಹಕರಿಂದ ಯಾವುದೇ ಸೇವಾ ವೆಚ್ಚ ನ್ಯಾಯಬೆಲೆ ಅಂಗಡಿ ಮಾಲೀಕರು ವಸೂಲಿ ಮಾಡಬಾರದು. ಸರ್ಕಾರವೇ ಅವರಿಗೆ ಸೇವಾ ವೆಚ್ಚ ನೀಡುತ್ತಿದೆ ಎಂದರು.

ಪಡಿತರದಾರರಿಂದ ಒಂದು ಪೈಸೆ ಹಣ ಪಡೆದರೆ ಅಂತವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಕಂದಾಯ, ಆಹಾರ ಇಲಾಖೆ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಿ ಜಿಲ್ಲೆಯ 508 ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ಮೇಲೆ ನಿಗಾವಹಿಸಲು ಹಾಗೂ ಅರ್ಜಿ ಹಾಕಿದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ರೇಷನ್ ನೀಡಬೇಕು ಸೂಚನೆ ನೀಡಿದರು.

ಮೇ-ಜೂನ್‌ವರೆಗೆ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 10ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್ ಒಂದಕ್ಕೆ ಒಂದು ಕೆ.ಜಿ. ತೊಗರಿಬೇಳೆ ಉಚಿತವಾಗಿ ವಿತರಿಸಲಾಗುತ್ತದೆ. ಈ ಎಲ್ಲ ಮಾಹಿತಿಯನ್ನು ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರಕಟಿಸಲು ಕ್ರಮವಹಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಸದಾಶಿವ ಮರ್ಜಿ ಅವರಿಗೆ ಸೂಚನೆ ನೀಡಿದರು.

Related