ತೈಲ ಬೆಲೆ ಏರಿಕೆ; ಔರಾದ್‌ನಲ್ಲಿ ಪ್ರತಿಭಟನೆ

ತೈಲ ಬೆಲೆ ಏರಿಕೆ; ಔರಾದ್‌ನಲ್ಲಿ ಪ್ರತಿಭಟನೆ

ಔರಾದ: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರ ನೇತೃತ್ವದಲ್ಲಿ (ಗುರುವಾರ ಜೂನ್‌ 20) ರಂದು ಔರಾದ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಔರಾದ(ಬಿ) ಮಂಡಲ ಘಟಕದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರದ ಜನವಿರೋಧಿ ನೀತಿಯನ್ನು ಘೋಷಣೆಗಳನ್ನು ಕೂಡುವ ಮೂಲಕ ಖಂಡಿಸಿದರು. ಪಟ್ಟಣದ ಎಪಿಎಂಸಿ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನಿರ್ಧಾರವನ್ನು ವಿರೋಧಿಸಲಾಯಿತು. ಶಾಸಕರು ಹಾಗೂ ಮುಖಂಡರು ಎತ್ತಿನ ಬಂಡಿಯನ್ನು ಹತ್ತಿ ತೈಲ ಬೆಲೆ ಏರಿಕೆಯಿಂದ ರೈತರು ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಕೂಡಲೇ ತೈಲ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಸರ್ಕಾರ ಬಂದು ಒಂದು ವರ್ಷವಾಗಿದೆ. ಸರ್ಕಾರ ರೈತರು, ಬಡವರು, ಕೂಲಿ ಕಾರ್ಮಿಕರಿಗೆ ನೆರವಾಗುವ ಬದಲು ಸಂಕಷ್ಟಕ್ಕೆ ದೂಡುತ್ತಿದೆ. ಈಗಾಗಲೇ ಜನತೆ ಸಂಕಷ್ಟದಲ್ಲಿದ್ದಾರೆ. ಇಂಥಹದರಲ್ಲಿ ತೈಲ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಆಮೀಷಗಳನ್ನು ತೋರಿಸಿ ಜನರನ್ನು ಯಾಮಾರಿಸಿ ರಾಜ್ಯದಲ್ಲಿ ಅಧಿಕಾರ ಪಡೆದಿದೆ. ಯಾವ ಅಭಿವೃದ್ಧಿಯೂ ಇಲ್ಲದೇ ಸರ್ಕಾರದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲ. ಶಾಸಕರಿಗೂ ಕೂಡ ಅನುದಾನ ಕೊಡುತ್ತಿಲ್ಲ. ಬಡವರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಅಧಿಕಾರ ಬಂದ ಕೂಡಲೇ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಜನವಿರೋಧಿ, ಅಭಿವೃದ್ಧಿ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ನೀತಿಯಿಂದ ಜನತೆ ಕಂಗಾಲಾಗಿದ್ದಾರೆ. ಹಾಗಾಗಿ ಪಕ್ಷದ ರಾಜ್ಯಾಧ್ಯಕ್ಷರ ನಿರ್ದೇಶನದಂತೆ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದ್ದು, ಔರಾದ್‌ನಲ್ಲಿಯೂ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ. ಬಹಳಷ್ಟು ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ ಎಂದರು.

ಚುನಾವಣೆ ಸಂದರ್ಭದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಪಡೆದು ಮುಖ್ಯಮಂತ್ರಿಯವರು ಜನರನ್ನು ಮೋಸ ಮಾಡುತ್ತಿದ್ದಾರೆ. ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ ಮುಖ್ಯಮಂತ್ರಿಗಳು ತಾವೇ ತೈಲ ಬೆಲೆ ಏರಿಕೆ ಮಾಡಿರುವುದು ವಿಪರ್ಯಾಸ. ಸರ್ಕಾರ ಕೂಡಲೇ ತೈಲಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯಬೇಕೆAದು ಆಗ್ರಹಿಸಿದರಲ್ಲದೇ ರಾಜ್ಯ ಸರ್ಕಾರ ಜನವಿರೋಧಿ ನೀತಿಯನ್ನು ಕೈಬಿಡುವವರೆಗೆ ತಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಔರಾದ(ಬಿ) ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ಬಿರಾದಾರ, ಶಿವರಾಜ ಅಲ್ಮಾಜೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಬಸವರಾಜ ಪಾಟೀಲ, ಶಿವಾಜಿರಾವ ಕಾಳೆ, ಅಶೋಕ ಅಲ್ಮಾಜೆ, ರಾಮರೆಡ್ಡಿ ಪಾಟೀಲ, ಸಂತೋಷ ಪೋಕಲವಾರ, ಕೇರಬಾ ಪವಾರ್, ಸಂಜು ವಡೆಯರ್, ಬಸವರಾಜ ಹಳ್ಳೆ, ಖಂಡೋಬಾ ಕಂಗಟೆ, ರವೀಂದ್ರ ರೆಡ್ಡಿ, ಸಚಿನ್ ಬಿರಾದಾರ, ಸಚಿನ ರಾಠೋಡ್, ಶ್ರೀನಿವಾಸ ಖೂಬಾ, ಸುಜಿತ ರಾಠೋಡ್ ಸೇರಿದಂತೆ ಇತರರಿದ್ದರು.

Related