ನಂದಿನಿ ಉತ್ಪನ್ನಗಳು ಕನ್ನಡ ರಾಯಭಾರಿಯಾಗಲಿ

ನಂದಿನಿ ಉತ್ಪನ್ನಗಳು ಕನ್ನಡ ರಾಯಭಾರಿಯಾಗಲಿ

ಬೆಂಗಳೂರು: ತನ್ನ ಎಲ್ಲ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸುವ ಮೂಲಕ ಕನ್ನಡದ ರಾಯಭಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ಜವಾಬ್ದಾರಿ ಹೆಚ್ಚಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದರು.

ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ನಿಯಮಿತದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮಿಳುನಾಡು, ಆಂಧ್ರಪ್ರದೇಶ, ದಕ್ಷಿಣ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಕೆ.ಎಂ.ಎಫ್‍ನ ಉತ್ನನ್ನಗಳು ರಫ್ತಾಗುತ್ತಿದ್ದು, ಅವುಗಳ ಮೇಲೆ ಕನ್ನಡ ಸಂಸ್ಕøತಿಯನ್ನು ಪರಿಚಯಿಸುವ ಹೆಸರುಗಳನ್ನು ಇಡಬೇಕು. ಆ ಮೂಲಕ ನಂದಿನಿ ಜತೆ ಕನ್ನಡವನ್ನು ಬ್ರಾಂಡ್ ಮಾಡುವಂತೆ ಸಲಹೆ ನೀಡಿದರು.

ದಕ್ಷಿಣ ಭಾರತದ ಅತಿ ದೊಡ್ಡ ಸಂಸ್ಥೆಯಾಗಿರುವ ಕೆ.ಎಂ.ಎಫ್, 130ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ವಹಿವಾಟು ನಡೆಸುತ್ತಿದೆ. ಹಾಗಾಗಿ ಪ್ರತೀ ಉತ್ಪನ್ನದ ಮೇಲೂ ಕನ್ನಡವನ್ನು ಬಳಸುವ ಹಾಗೂ ಪ್ರತೀ ಉತ್ಪನ್ನಕ್ಕೂ ಕನ್ನಡದ ವಿಶಿಷ್ಟ ಹೆಸರುಗಳನ್ನೇ ಇಟ್ಟು ಆ ಮೂಲಕ ಕಸ್ತೂರಿ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ರಾಯಭಾರಿಯಾಗುವಂತೆ ಸೂಚಿಸಿದರು.

ನಮ್ಮ ನೆಲದ ಸಂಸ್ಥೆ, ರೈತರ ಒಡನಾಡಿಯಾದ ಸಂಸ್ಥೆ ಇಂಗ್ಲಿಷ್‍ಗೆ ಬ್ರಾಂಡ್ ಆಗಿ ಕೆಲಸ ಮಾಡುವುದು ಎಷ್ಟು ಸರಿ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಯಾವ ಅಧಿಕಾರಿ/ನೌಕರರ ಬಗ್ಗೆ ಕ್ರಮವಹಿಸಿದ್ದೀರಿ ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಕೆ.ಎಂ.ಎಫ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಪ್ರಾಧಿಕಾರ ಸದಸ್ಯರಾದ ರೋಹಿತ್ ಚಕ್ರತೀರ್ಥ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡಪರ ಹೋರಾಟಗಾರರಾದ ಅರುಣ್ ಜಾವಗಲ್, ಕೆ.ಎಂ.ಎಫ್ ನ ನಿರ್ದೇಶಕ (ಆಡಳಿತ)ರಾದ ಡಾ.ಸಿ.ಎನ್.ರಮೇಶ್, ಅಪರ ನಿರ್ದೇಶಕರಾದ ಎಂ.ಎಸ್.ಸುಹೇಲ್, ವೆಬ್ ಪೋರ್ಟಲ್ ಯೋಜನಾಧಿಕಾರಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Related