ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಸಿಎಂ

ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಸಿಎಂ

ಬೆಂಗಳೂರು: ನಾವು ಹುಟ್ಟಿರುವುದು ಕನ್ನಡಾಂಬೆ ಮಡಿಲಲ್ಲಿ ಹಾಗಾಗಿ ಪ್ರತಿಯೊಬ್ಬರೂ ನಾವೆಲ್ಲರೂ ಕನ್ನಡವನ್ನು ಗೌರವಿಸಬೇಕು ಸ್ಮರಿಸಬೇಕು ಮತ್ತೆ ಎಂದೆಂದಿಗೂ ನಾವು ಕನ್ನಡಿಗರಾಗಿರಬೇಕು. ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದಾಮಯ್ಯ ಕರೆ ನೀಡಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಬಂಡ ಮುಖ್ಯಮಂತ್ರಿಗಳು ರಾಜ್ಯ ಮತ್ತು ನೆರೆ ರಾಜ್ಯಗಳ ಬಗ್ಗೆ ಹೇಳಿಕೆ ಕೊಡ್ತಾರೆ: ಬಿವೈವಿ

ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು

ಪ್ರತಿಯೊಬ್ಬರೂ ಕೂಡ ಕರ್ನಾಟಕದಲ್ಲಿ ಬಾಳಿ ಬದುಕುವವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂದು ತೀರ್ಮಾನ ಮಾಡಬೇಕು. ಕನ್ನಡಿಗರು ಉದಾರಿಗಳು. ಹಾಗಾಗಿಯೇ ಬೇರೆ ಭಾಷೆ ಮಾತನಾಡುವವರೂ ಕೂಡ ಕನ್ನಡ ಕಲಿಯದೆ ಬದುಕುವ ವಾತಾವರಣ ಕರ್ಣಾಟಕದಲ್ಲಿದೆ. ತಮಿಳುನಾಡು , ಆಂಧ್ರ, ಕೇರಳಕ್ಕೆ ಹೋದರೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ನಾವೂ ಕೂಡ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು. ಅದರಲ್ಲಿ ಕೀಳರಿಮೆ ಅಗತ್ಯವಿಲ್ಲ ಎಂದರು.

ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ.ಅದಕ್ಕಾಗಿ ಇಲ್ಲಿ ವಾಸ ಮಾಡುವವರೆಲ್ಲಾರೂ ಕನ್ನಡವನ್ನು ಕಲಿಯಲೇಬೇಕು. ಹಾಗೆಂದು ನಾವು ಸುಮ್ಮನಿರುವಂತಿಲ್ಲ. ಕನ್ನಡಿಗರು ದುರಭಿಮಾನಿಗಳಲ್ಲ. ಆದರೆ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ದುರಭಿಮಾನಿಗಳಂತೆ ನಾವು ಆಗಬೇಕಿಲ್ಲ. ಆದರೆ ನಮ್ಮ ಭಾಷೆ, ನೆಲ, ನಾಡಿನ ಬಗೆ ಗೌರವ, ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ನವೆಂಬರ್ ಒಂದರೊಳಗೆ ಕಾಮಗಾರಿ ಪೂರ್ಣಗೊಳಬೇಕು

ಭುವನೇಶ್ವರಿ ತಾಯಿ ಎಲ್ಲರಿಗೂ ಈ ನಿಟ್ಟಿನಲ್ಲಿ ಎಲ್ಲರಿಗೂ ಸ್ಪೂರ್ತಿ ಕೊಡಲಿ ಎಂದು ಆಶಿಸುತ್ತೇನೆ ಎಂದರು. ನವೆಂಬರ್ 01, 2024 ರೊಳಗೆ ಪೂರ್ಣಗೊಳ್ಳಬೇಕು. ಈಗಾಗಲೇ ಕೆಲಸ  ಪ್ರಾರಂಭವಾಗಿದೆ. ಹಣದ ಕೊರತೆಯೂ ಇಲ್ಲ.ಇದೊಂದು ಉತ್ತಮವಾದ ಕೆಲಸ. ವಿಧಾನ ಸೌಧದ ಆವರಣದಲ್ಲಿ ಸುಮಾರು 25 ಅಡಿ ಎತ್ತರ ಇರುವ ಕಂಚಿನ ಪ್ರತಿಮೆ ನಿರ್ಮಾಣವಾಗಲಿದೆ. ಜನರಿಗೆ ಆರ್ಕರ್ಷಣೆಯಾಗುವ ರೀತಿಯಲ್ಲಿ ಇರಬೇಕೆಂದು ಸೂಚಿಸಲಾಗಿದೆ.ಅನೇಕ ರಾಜಕಾರಣಿಗಳ ಪ್ರತಿಮೆಗಳನ್ನು ಸ್ಥಾಪಿಸಿದ್ದೇವೆ. ಪ್ರತಿಮೆ ವಿಧಾನಸೌಧದ ಆಕರ್ಷಣೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,  ಎಚ್ ಕೆ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಶಾಸಕರು ಮೊದಲಾದವರು ಉಪಸ್ಥಿತರಿದ್ದರು.

Related