ನನ್ನ ಪ್ರಕಾರ ಹಾಲಿನ ದರ ಇನ್ನೂ ಹೆಚ್ಚಳ ಮಾಡಬೇಕಿತ್ತು: ಡಿಸಿಎಂ

 ನನ್ನ ಪ್ರಕಾರ ಹಾಲಿನ ದರ ಇನ್ನೂ ಹೆಚ್ಚಳ ಮಾಡಬೇಕಿತ್ತು: ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿರುವ ರೈತರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಹಿತ ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡಲಾಗಿದೆ. ಇದನ್ನು ವಿರೋಧಿಸಿರುವ ಬಿಜೆಪಿಯ ರೈತ ವಿರೋಧಿ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮತ್ತೆ ಜೈಲೇ ಗತಿ..!

ಬಿಜೆಪಿ ರೈತರ ವಿರೋಧಿಗಳು ಎಂದು ಮತ್ತೊಮ್ಮೆ ಸಾಬೀತಾಗಿದೆ. ರೈತರ ಹಿತಕ್ಕಾಗಿ ಕೇವಲ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದೂ ಹಾಲಿನ ಪ್ರಮಾಣ ಹೆಚ್ಚಳಕ್ಕೆ ಅನುಗುಣವಾಗಿ. ರಾಜಕೀಯವಾಗಿ ಯಾರು ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ ಹಸುಗಳ ಮೇವಿನ ಬೆಲೆ ಸೇರಿದಂತೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೈತರ ಹಿತ ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಹಾಲು ನೀಡಲಾಗುತ್ತಿದೆ.

ಕೆಎಂಎಫ್ ಎಂದರೆ ರೈತರು, ಅದು ರೈತರ ಒಕ್ಕೂಟ. ಯಾರು ಏನಾದರೂ ವಿವಾದ ಮಾಡಲಿ, ಪರವಾಗಿಲ್ಲ. ನನ್ನ ಪ್ರಕಾರ ಹಾಲಿನ ದರ ಇನ್ನೂ ಹೆಚ್ಚಳ ಮಾಡಬೇಕಿತ್ತು. ರೈತರು ತಮ್ಮ ಹಸುಗಳನ್ನು ಮಾರಿಕೊಳ್ಳುವ ದುಸ್ಥಿತಿಯಲ್ಲಿ ಇದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂದು ತಿಳಿದು, ಆಮೇಲೆ ಮಾತಾಡಲಿ. ರೈತರನ್ನು ಬದುಕಿಸುವ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.

Related