ವಿಪತ್ತು ನಿರ್ವಹಣಾ ತಂಡಗಳ ನಿಯೋಜನೆ

ವಿಪತ್ತು ನಿರ್ವಹಣಾ ತಂಡಗಳ ನಿಯೋಜನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗಾಗಿ ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿ “ವಿಪತ್ತು ನಿರ್ವಹಣಾ ತಂಡ”ಗಳುನ್ನು ನಿಯೋಜನೆ ಮಾಡಿಕೊಂಡು ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದು ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರವರು ತಿಳಿಸಿದರು.

ನಗರದಲ್ಲಿ ವಿಪತ್ತು ನಿರ್ವಹಣೆಗಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದು, ಮ್ಯಾನ್ ಹೋಲ್‌ಗಳು ತೆರೆದುಕೊಳ್ಳುವುದು, ಮರ/ವಿದ್ಯುತ್ ಕಂಬಗಳು ಬೀಳುವುದನ್ನು ಹಾಗೂ ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಆಯಾ ವಲಯಗಳ ಉಪ ವಿಭಾಗಗಳಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಅಗ್ನಿ ಶಾಮಕ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲು ಸೂಚಿಸಿದರು.

ನಗರದಲ್ಲಿ ಕಳೆದ ಒಂದು ವಾರದಿಂದ ಬೇರೆ ಬೇರೆ ಸ್ಥಳಗಳಲ್ಲಿ ಮಳೆಯಾಗುತ್ತಿದ್ದು, ಒಂದು ಕಡೆ ಒಂದೊಂದು ರೀತಿಯಲ್ಲಿ ಮಳೆಯಾಗುತ್ತಿದೆ. ಕೆಲವಡೆ ಸಾಮಾನ್ಯ, ಇನ್ನು ಕೆಲವೆಡೆ ಮಧ್ಯಮ ಹಾಗೂ ಹೆಚ್ಚಾಗಿ ಮಳೆಯಾಗಿರುವ ವರದಿಯಾಗಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 150 ಕಡೆ ನೀರು ನಿಂತಿದೆ. ನಿಂತ ನೀರು 2 ಗಂಟೆಯೊಳಗಾಗಿ ಹರಿದುಹೋಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗಿರುದಿಲ್ಲ ಎಂದು ಹೇಳಿದರು.

ಪ್ರಾರಂಭವಾದಾಗಿನಿಂದ 325 ಮರಗಳು ಬಿದ್ದಿದ್ದು, ಅದರಲ್ಲಿ 320 ಮರಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 698 ರೆಂಬೆ ಕೊಂಬೆಗಳು ಬಿದ್ದಿದ್ದು, 650 ತೆರವುಗೊಳಿಸಲಾಗಿದೆ. ಉಳಿದ ಮರ, ರೆಂಬೆ/ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಸೂಚನೆ ನೀಡಿದರು.

ಇದನ್ನೂ ಓದಿ: ಮೈತ್ರಿ ಶಾಶ್ವತವಲ್ಲ: ಡಿಕೆಶಿ

ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಈ ಬಾರಿಯ ಆಯವ್ಯಯದಲ್ಲಿ 10 ಕೋಟಿ ರೂ. ಮೀಸಲಿಡಲಾಗಿದೆ. ಮೀಸಲಿಟ್ಟಿರುವ ಅನುದಾನವನ್ನು ಹೊಸದಾಗಿ ಪ್ರವಾಹ ಪೀಡಿತ ಪ್ರದೇಶ ಉಂಟಾಗುವುದು, ಪಂಪ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ತುರ್ತು ಸಮಸ್ಯೆಗಳಿಗಾಗಿ ಅನುದಾನ ಬಳಸಿಕೊಳ್ಳಲಾಗುವುದು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲಕೇರಿ, ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ವಿನೊತ್ ಪ್ರಿಯಾ, ರಮೇಶ್, ಶಿವನಾಂದ್ ಕಪಾಶಿ, ಸ್ನೇಹಲ್, ರಮ್ಯಾ, ಪ್ರೀತಿ ಗೆಹ್ಲೋಟ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related