ಸಚಿವರ ಜೊತೆಗೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಆರ್‌. ಅಶೋಕ್  

ಸಚಿವರ ಜೊತೆಗೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಆರ್‌. ಅಶೋಕ್  

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮ ಬೆಂಗಳೂರಿನಲ್ಲಿ ಬಹುಕೋಟಿ ಹಗರಣ ನಡೆದಿರುವುದರಿಂದ ಸಚಿವ ಬಿ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಒತ್ತಾಯಿಸಿದ್ದಾರೆ

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದಾರೆ. ಸಚಿವ ಬಿ.ನಾಗೇಂದ್ರ ಜೊತೆ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಒತ್ತಾಯಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ವಿಧಾನಸೌಧದಿಂದ ರಾಜಭವನವರೆಗೆ ತೆರಳಿ, ರಾಜ್ಯಪಾಲರಿಗೆ ದೂರು ಸಲ್ಲಿಸಿದರು. ಇದನ್ನೂ ಓದಿ: ನಾಗೇಂದ್ರ ಸ್ವಯಂ ಪ್ರೇರಣೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ: ಡಿಸಿಎಂ

ಸಚಿವ ಬಿ.ನಾಗೇಂದ್ರ ಅವರು ಈ ಪ್ರಕರಣದಲ್ಲಿ ಸಣ್ಣ ಆರೋಪಿ. ಇದಕ್ಕೂ ದೊಡ್ಡ ಆರೋಪಿಗಳು ಇದರ ಹಿಂದೆ ಇದ್ದಾರೆ. ಈ ಎಲ್ಲ ಸತ್ಯ ಹೊರಬರಲು ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಅಕ್ರಮದ ಹಣವನ್ನು ಸಚಿವರೊಬ್ಬರೇ ನುಂಗಿಲ್ಲ. ಇದರಲ್ಲಿ ಇಡೀ ಸಚಿವ ಸಂಪುಟ ಶಾಮೀಲಾಗಿದ್ದು, ಹಣ ಹೈದರಾಬಾದ್‌ಗೆ ಹೋಗಿ ನಂತರ ದೆಹಲಿಗೆ ತಲುಪಿದೆ. ನನ್ನ ಬುಡಕ್ಕೆ ಬಂದುಬಿಡುತ್ತದೆ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆ ಮಾಡಿಸಲು ಒಪ್ಪುತ್ತಿಲ್ಲ. ರಾಹುಲ್‌ ಗಾಂಧಿ ಹಾಗೂ ರಣದೀಪ್‌ ಸಿಂಗ್‌ ಸುರ್ಜೇವಾಲ ಕೂಡ ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

 

 

Related