ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಮಲಿಂಗ ರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲುವೆ ಸೃಷ್ಟಿಯಾಗಿದೆ.
ಇನ್ನು ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಕುರಿತಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನಮ್ಮ ಕುಟುಂಬದ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ, ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು (ಶನಿವಾರ ಜೂನ್ 06) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ, ಅವರು (ರಾಮಲಿಂಗಾರೆಡ್ಡಿ) ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ ಮಾಡುತ್ತಿರುವವರು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ನಾವು ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವೆ, ಬೇರೆ ಯಾವ ವಿಚಾರ ಮಾತನಾಡಿದ್ದೇವೆ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯೇ? ಎಂದು ಮರುಪ್ರಶ್ನಿಸಿದರು. ಇದನ್ನೂ ಓದಿ: ಕಾಮಗಾರಿ ಪಡೆಯಲು ಲಂಚ, ಬಿಲ್ ಪಾವತಿಗೂ ಲಂಚ!?
ಇದೆಲ್ಲಾ ಆಗುತ್ತಾ ಇರಬೇಕು. ಮಳೆ, ಗುಡುಗು, ಸಿಡಿಲು, ಸೂರ್ಯ ಮುಳುಗುವುದು, ಹುಟ್ಟುವುದು ಸಹಜ ಎಂದು ಹೇಳಿದರು. ರಾಮಲಿಂಗಾರೆಡ್ಡಿ ಅವರು ಪಕ್ಷ ಬಿಟ್ಟು ಹೋಗುತ್ತಾರೆಯೇ? ಹಾಗೆಂದು ಹೇಳಿದ್ದಾರೆಯೇ? ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಒಂದಷ್ಟು ತಪ್ಪು ಸಂವಹನ ಆಗಿದೆ. ಸರಿಪಡಿಸುತ್ತೇವೆ ಎಂದರು.
