ಶಹಾಪುರ: ಸರ್ಕಾರಿ ಆಸ್ಪತ್ರೆಗಳು ಬಡವರು, ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದು, ಬಡರೋಗಿಗಳಿಗೆ ಆರೋಗ್ಯ ಸೌಲಭ್ಯಗಳು ಒದಗಿಸುವುದು ಆದ್ಯ ಕರ್ತವ್ಯವಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿನ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಕರ್ತವ್ಯ ನಿರ್ವಾಹಣೆಯಲ್ಲಿ ಯಾವುದೇ ಲೋಪಗಳಾಗಬಾರದು. ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಬಡವರೇ ಬರಲಿದ್ದು ಸೂಕ್ತ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಬಡವರು ಔಷಧಿಗಾಗಿ ಪರದಾಡುವ ಪರಿಸ್ಥೀತಿ ಬರಬಾರದು ಎಂದರು.
ಇಲ್ಲಿನ ಕೇಲ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದು ಹಗಲು ರಾತ್ರಿಯೆನ್ನದೆ ಸಮರ್ಪಣ ಮನೋಭಾವನೆಯಿಂದ ಸೇವೆ ಸಲ್ಲಿಸುತ್ತಿದ್ದು. ಅದರಿಂದಾಗಿಯೇ ಸರ್ಕಾರಿ ಆಸ್ಪತ್ರೆ ಬಗ್ಗೆ ಜನರು ನಂಬಿಕೆ ಉಳಿಸಿಕೊಂಡು ಬರುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಕರ್ಯಗಳು ಹಾಗೂ ತಜ್ಞ ವೈದ್ಯರಿದ್ದಾರೆ, ಅವುಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಪ್ರಸೂತಿ ವೈದ್ಯರಿದ್ದರೂ ಆಸ್ಪತ್ರೆಗಳಿಗೆ ಜನ ಬರದೆ ಶೂನ್ಯ ಹೆರಿಗೆಗಳಾಗುತ್ತಿವೆ. ಹಾಗಾಗಿ ಅಂತಹ ಹುದ್ದೆಗಳನ್ನು ಅಗತ್ಯ ಇರುವೆಡೆಗೆ ಮರು ಹೊಂದಾಣಿಕೆ ಮಾಡಲಾಗುವುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಹೊಸ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳು ತಲುಪುವಂತೆ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಸಿಗುವ ಆರೋಗ್ಯ ಸೇವೆಗಳು, ಇತರೆ ಸೌಲಭ್ಯಗಳನ್ನು ಒದಗಿಸುತ್ತಿರುವ ಕುರಿತು ಸಿಬ್ಬಂದಿ ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗಳು ಜನರಿಗೆ ಸಿಗುತ್ತಿರುವ ಕುರಿತು ಸಾರ್ವಜನಿಕರು ಹಾಗೂ ರೋಗಿಗಳೊಂದಿಗೆ ಚರ್ಚಿಸಿ ಸಚಿವರು ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ, ಅಭಿವೃದ್ಧಿಗೆ ಕೈಜೋಡಿಸಿ; ಸಚಿವ ದರ್ಶನಾಪುರ
ಸಚಿವರು ಗರಂ
ಆಸ್ಪತ್ರೆಯ ನಿರ್ವಹಣೆಯ ವೈಫಲ್ಯಕ್ಕೆ ಜನಸಾಮಾನ್ಯರು ಹೈರಾಣು ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿನ ವೈದ್ಯರು, ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಲ್ಲಾ. ಡಯಾಲೀಸಿಸ್ ಗಾಗಿ ಹಣ ಪಡೆಯುತ್ತಾರೆ ಎಂದು ರೋಗಿಯೊಬ್ಬರು ಹಣ ನೀಡಿದ ಪೋನ್‌ಪೇಯನ್ನು ಸಚಿವರಿಗೆ ತೋರಿಸಿದರು. ಇದಕ್ಕೆ ಸಚಿವರು ಗರಂ ಆಗಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಟಿಎಚ್‌ಓ ಡಾ.ರಮೇಶ ಗುತ್ತೇದಾರ, ಆಸ್ಪತ್ರೆ ಆಡಾಳಿತಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್, ಡಾ. ವೆಂಕಟೇಶ ಬೈರಮಡಿಗಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.
